* ಲಸಿಕೆ ಪ್ರಮಾಣ ಕಡಿಮೆ ಇರುವೆಡೆ ಕೇಸು ಭಾರೀ ಹೆಚ್ಚಳ* 3 ವಾರಗಳಿಂದ ಹೊಸ ಸೋಂಕಿತರ ಪ್ರಮಾಣ ದ್ವಿಗುಣ* ಜೂ.20ಕ್ಕೆ 8000 ಇದ್ದ ಕೇಸು ಇದೀಗ 35500ಕ್ಕೆ ಏರಿಕೆ

ವಾಷಿಂಗ್ಟನ್‌(ಜೂ.16): 3.50 ಕೋಟಿ ಕೊರೋನಾ ಸೋಂಕಿತರು ಮತ್ತು 6.23 ಲಕ್ಷ ಜನರ ಸಾವು ಕಂಡ ಅಮೆರಿಕದಲ್ಲಿ ಮತ್ತೆ ದೈನಂದಿನ ಕೊರೋನಾ ಕೇಸಿನಲ್ಲಿ ಭಾರೀ ಏರಿಕೆ ದಾಖಲಾಗತೊಡಗಿದೆ. ಜೂನ್‌ 20ರಂದು ಕೇವಲ 8000ಕ್ಕೆ ಇಳಿದಿದ್ದ ದೈನಂದಿನ ಕೇಸಿನ ಪ್ರಮಾಣ ಬುಧವಾರ 35500 ಗಡಿ ದಾಟಿದೆ. ಅಂದರೆ ಕಳೆದ ಮೂರು ವಾರಗಳಿಂದಲೂ ಹೊಸ ಕೇಸಿನಲ್ಲಿ ದ್ವಿಗುಣವಾಗುತ್ತಲೇ ಇದೆ.

ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಡೆಲ್ಟಾವೈರಸ್‌ ಇದೀಗ ಅಮೆರಿಕದಲ್ಲೂ ನಂ.1 ರೂಪಾಂತರಿ ತಳಿಯಾಗಿ ಹೊರಹೊಮ್ಮಿದ್ದು, ದೇಶದಲ್ಲಿ ಸೋಂಕಿನ ಹೊಸ ಅಲೆಗೆ ಕಾರಣವಾಗಿದೆ. ಅಮೆರಿಕದ 51 ರಾಜ್ಯಗಳ ಪೈಕಿ 49 ರಾಜ್ಯಗಳಲ್ಲಿ ಸೋಂಕಿನ ಗತಿ ಏರುಮುಖವಾಗಿದೆ.

ಅದರಲ್ಲೂ ಲಸಿಕೆ ವಿತರಣೆ ಪ್ರಮಾಣ ಕಡಿಮೆ ಇರುವ ರಾಜ್ಯಗಳಲ್ಲೇ ಸೋಂಕು ಏರು ಮುಖವಾಗಿರುವುದು ಕಂಡುಬಂದಿದೆ. ಫೈಝರ್‌, ಅಸ್ಟ್ರಾಜೆನೆಕಾದ ಸಿಂಗಲ್‌ ಡೋಸ್‌ ಡೆಲ್ಟಾವೈರಸ್‌ ಮೇಲೆ ಹೆಚ್ಚಿನ ಪರಿಣಾಮ ಬೀರದು ಎಂಬ ಅಧ್ಯಯನ ವರದಿಗಳ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ. ಅಮೆರಿಕದ ಶೇ.55.6ರಷ್ಟುಜನರು ಈಗಾಗಲೇ ಕನಿಷ್ಠ 1 ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

ಆದರೆ ಲಸಿಕೆಯ ಪರಿಣಾಮವೋ ಎಂಬಂತೆ ಸಾವಿನ ಪ್ರಮಾಣ ಮಾತ್ರ ಸೋಂಕಿನ ಮಟ್ಟದಲ್ಲಿ ಏರಿಕೆ ಕಂಡಿಲ್ಲ.