ಕೊರೋನಾಗೆ ಅಮೆರಿಕ ಲಸಿಕೆ ನವೆಂಬರ್ 01ಕ್ಕೆ ಸಿದ್ಧ..?
ಅಮೆರಿಕದಲ್ಲಿ 62 ಲಕ್ಷ ಜನರಿಗೆ ಸೋಂಕು ತಗುಲಿ 1.90 ಲಕ್ಷ ಜನರನ್ನು ಬಲಿ ಪಡೆದಿರುವ ಕೊರೋನಾ ಹೆಮ್ಮಾರಿ ಡೊನಾಲ್ಡ್ ಟ್ರಂಪ್ ಅವರ ಪುನರಾಯ್ಕೆ ಹಾದಿಯಲ್ಲಿ ದೊಡ್ಡ ತೊಡಕಾಗಿದೆ. ಹೀಗಾಗಿ ನ.3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಮತದಾನಕ್ಕೂ ಮುನ್ನ ಹೇಗಾದರೂ ಲಸಿಕೆ ಬಿಡುಗಡೆ ಮಾಡಲೇಬೇಕೆಂದು ಟ್ರಂಪ್ ಆಡಳಿತ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲೇ ಇಂಥದ್ದೊಂದು ಸೂಚನೆ ನೀಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನ್ಯೂಯಾರ್ಕ್(ಸೆ.04): ವಿಶ್ವದಲ್ಲಿ 2.60 ಕೋಟಿ ಜನರಿಗೆ ತಗುಲಿ 8.50 ಲಕ್ಷ ಜನರನ್ನು ಬಲಿ ಪಡೆದಿರುವ ಮಾರಕ ಕೊರೋನಾ ಸೋಂಕಿಗೆ ಶೀಘ್ರವೇ ಅಮೆರಿಕದಲ್ಲಿ ಲಸಿಕೆ ಬಿಡುಗಡೆಯಾಗುವ ಸ್ಪಷ್ಟಸುಳಿವು ಸಿಕ್ಕಿದೆ. ನ.1ರ ವೇಳೆಗೆ ಲಸಿಕೆ ವಿತರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಅಮೆರಿಕದ ಎಲ್ಲಾ 51 ರಾಜ್ಯಗಳಿಗೆ ಮಾಹಿತಿ ರವಾನಿಸಿರುವುದು ಇಂಥದ್ದೊಂದು ಸುಳಿವನ್ನು ನೀಡಿದೆ.
ಅಮೆರಿಕದಲ್ಲಿ 62 ಲಕ್ಷ ಜನರಿಗೆ ಸೋಂಕು ತಗುಲಿ 1.90 ಲಕ್ಷ ಜನರನ್ನು ಬಲಿ ಪಡೆದಿರುವ ಕೊರೋನಾ ಹೆಮ್ಮಾರಿ ಡೊನಾಲ್ಡ್ ಟ್ರಂಪ್ ಅವರ ಪುನರಾಯ್ಕೆ ಹಾದಿಯಲ್ಲಿ ದೊಡ್ಡ ತೊಡಕಾಗಿದೆ. ಹೀಗಾಗಿ ನ.3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಮತದಾನಕ್ಕೂ ಮುನ್ನ ಹೇಗಾದರೂ ಲಸಿಕೆ ಬಿಡುಗಡೆ ಮಾಡಲೇಬೇಕೆಂದು ಟ್ರಂಪ್ ಆಡಳಿತ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲೇ ಇಂಥದ್ದೊಂದು ಸೂಚನೆ ನೀಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಅಮೆರಿಕದಲ್ಲಿ ಔಷಧ ವಿತರಣೆ ಹಕ್ಕನ್ನು ಮ್ಯಾಕ್‌ಕೆಸಾನ್ ಕಾಪ್‌ರ್ ಪಡೆದುಕೊಂಡಿದ್ದು, ಈ ಸಂಸ್ಥೆಗೆ ದೇಶಾದ್ಯಂತ ವಿತರಣಾ ಜಾಲ ಸ್ಥಾಪಿಸಲು ಅಗತ್ಯವಾದ ಎಲ್ಲಾ ನೆರವು ನೀಡುವಂತೆ ಮತ್ತು ಇಂಥ ತುರ್ತು ಅನುಮತಿಗೆ ಯಾವುದಾದರೂ ಕಾನೂನು ಅಡೆತಡೆಗಳಿದ್ದರೆ ಅದನ್ನು ನಿವಾರಿಸುವಂತೆ ಅಮೆರಿಕ ಸೋಂಕು ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ)ದ ನಿರ್ದೇಶಕ ರಾಬರ್ಟ್ ರೆಡ್‌ಫೀಲ್ಸ್ ಆ.27ರಂದೇ ಎಲ್ಲಾ ರಾಜ್ಯಗಳಿಗೆ ಪತ್ರ ರವಾನಿಸಿದ್ದಾರೆ. ಹೀಗಾಗಿ ಟ್ರಂಪ್ ಆಡಳಿತ ನ.1ರ ವೇಳೆಗೆ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆಗೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ದೇಶದಲ್ಲಿ ಗುರುವಾರ ದಾಖಲೆಯ 85982 ಕೊರೋನಾ ಕೇಸ್ ಪತ್ತೆ..!
3 ಲಸಿಕೆ: ಆಕ್ಸ್‌ಫರ್ಡ್ ವಿವಿ ಸಹಯೋಗದಲ್ಲಿ ಆಸ್ಟ್ರಾಜೆನಿಕಾ, ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಜೊತೆಗೂಡಿ ಮೊಡೆರ್ನಾ ಮತ್ತು ಬಯೋಎನ್‌ಟೆಕ್ ಜೊತೆಗೂಡಿ ಫಿಜರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಗಳು ಈಗಾಗಲೇ ಅಮೆರಿಕದಲ್ಲಿ ಮೂರನೇ ಹಂತದ ಮಾನವ ಪ್ರಯೋಗಕ್ಕೆ ಒಳಪಟ್ಟಿವೆ. ಇವುಗಳ ಪೈಕಿ ಯಾವುದಾದರೂ ಒಂದು ಅಥವಾ ಎಲ್ಲಾ ಲಸಿಕೆಗಳನ್ನು ಅಮೆರಿಕ ಸರ್ಕಾರ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
ಉಚಿತ: ಆರಂಭಿಕ ಹಂತದಲ್ಲಿ ಅಮೆರಿಕ ಸರ್ಕಾರವೇ ಲಸಿಕೆಗಳನ್ನು ಖರೀದಿಸಿ ಅದನ್ನು ಆದ್ಯತೆಯ ಮೇಲೆ ಆರೋಗ್ಯ ಕಾರ್ಯಕರ್ತರು, ಅಗತ್ಯ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿ, ಹಿರಿಯ ನಾಗರಿಕರು, ರಾಷ್ಟ್ರೀಯ ಭದ್ರತಾ ಅಧಿಕಾರಿಗಳು, ಸೋಂಕು ತಗುಲಿರುವ ಅಥವಾ ಸಾಧ್ಯತೆ ಹೆಚ್ಚಿರುವ ಬುಡಕಟ್ಟು ಪಂಗಡಗಳ ಜನರಿಗೆ ನೀಡಲು ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ.
2 ಡೋಸ್: ಮೂಲಗಳ ಅನ್ವಯ, ಬಿಡುಗಡೆಯಾಗಲಿರುವ ಲಸಿಕೆಯನ್ನು ರೋಗಿಗಳಿಗೆ ಅಥವಾ ಸೋಂಕು ತಗುಲುವ ಸಂಭವ ಇರುವವರಿಗೆ 2 ಹಂತದಲ್ಲಿ ನೀಡಲಾಗುವುದು. ಮೊದಲ ಹಂತದಲ್ಲಿ ಲಸಿಕೆ ಪಡೆದ ಕೆಲ ದಿನಗಳ ನಂತರ ಮತ್ತೊಂದು ಹಂತದಲ್ಲಿ ಲಸಿಕೆ ಪಡೆಯಬೇಕಾಗುತ್ತದೆ.