ನವದೆಹಲಿ(ಸೆ.04): ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಮತ್ತೊಮ್ಮೆ ದಾಖಲೆಯ ಏರಿಕೆ ಕಂಡಿವೆ. ಗುರುವಾರ ದಾಖಲೆಯ 85,982 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 39.23 ಲಕ್ಷಕ್ಕೆ ಹೆಚ್ಚಳಗೊಂಡಿದೆ. ಈ ಮೂಲಕ ಭಾರತ ಅತಿ ಹೆಚ್ಚು ಕೊರೋನಾ ವೈರಸ್‌ ಪ್ರಕರಣ ದಾಖಲಾದ ದೇಶಗಳ ಪೈಕಿ 2ನೇ ಸ್ಥಾನದಲ್ಲಿರುವ ಬ್ರೆಜಿಲ್‌ (40.01 ಲಕ್ಷ ಕೇಸ್‌) ಅನ್ನು ಹಿಂದಿಕ್ಕುವ ಸನಿಹದಲ್ಲಿದೆ. 62.90 ಲಕ್ಷ ಸೋಂಕಿತರೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದೆ.

ಇದೇ ವೇಳೆ ದೇಶದಲ್ಲಿ ಕೊರೋನಾಕ್ಕೆ ಒಂದೇ ದಿನ 1101 ಮಂದಿ ಬಲಿ ಆಗುವುದರೊಂದಿಗೆ ಮೃತರ ಸಂಖ್ಯೆ 68,489ಕ್ಕೆ ತಲುಪಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಸಾವಿರಕ್ಕೂ ಅಧಿಕ ಕೊರೋನಾ ಸಾವುಗಳು ದಾಖಲಾಗುತ್ತಿವೆ.

30 ಲಕ್ಷ ಮಂದಿ ಗುಣಮುಖ:

ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಮಧ್ಯೆಯೂ ಗುಣಮುಖರಾದವರ ಸಂಖ್ಯೆ 30 ಲಕ್ಷ ಗಡಿ ದಾಟಿದೆ. ಗುರುವಾರ 70,519 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 30.27 ಲಕ್ಷಕ್ಕೆ ಹೆಚ್ಚಳಗೊಂಡಿದೆ.

ಕೊನೆಯ ಅನ್‌ಲಾಕ್‌ಗೆ ಸರ್ಕಾರ ಸಿದ್ಧ, ದಿನದ ಕೊರೋನಾ 8865!

5 ರಾಜ್ಯಗಳಲ್ಲಿ ಶೇ.70ರಷ್ಟು ಸೋಂಕು:

ಇದೇ ವೇಳೆ ದೇಶದ ಶೇ.70ರಷ್ಟು ಕೊರೋನಾ ಪ್ರಕರಣಗಳು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ ಹಾಗೂ ತಮಿಳುನಾಡು- ಈ ಐದು ರಾಜ್ಯಗಳಲ್ಲೇ ದಾಖಲಾಗಿವೆ ಎಂಬ ಆತಂಕಕಾರಿ ವಿಚಾರವನ್ನು ಕೇಂದ್ರ ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಸಾವಿನ ಸಂಖ್ಯೆ ತಗ್ಗಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.