20 ದೇಶಕ್ಕೆ ಹಬ್ಬಿದ ಕೊರೋನಾ ವೈರಸ್: ವಿಶ್ವಾದ್ಯಂತ ಆರೋಗ್ಯ ತುರ್ತು ಸ್ಥಿತಿ!
ಕೊರೋನಾ: ವಿಶ್ವಾದ್ಯಂತ ಆರೋಗ್ಯ ತುರ್ತು ಸ್ಥಿತಿ!| ಸುಮಾರು 20 ದೇಶಕ್ಕೆ ಮಾರಕ ವೈರಸ್ ಹಬ್ಬಿದ ಹಿನ್ನೆಲೆ| ಡಬ್ಲ್ಯುಎಚ್‌ಒ ಘೋಷಣೆ| ಚೀನಾದಲ್ಲಿ ಮತ್ತೆ 43 ಬಲಿ
ಬೀಜಿಂಗ್[ಫೆ.01]: ಚೀನಾದಲ್ಲಿ ವ್ಯಾಪಕವಾಗಿರುವ ಮತ್ತು ವಿಶ್ವದ 20ಕ್ಕೂ ಹೆಚ್ಚು ದೇಶಗಳಲ್ಲಿ ಆತಂಕದ ಸರಮಾಲೆಯನ್ನೇ ಹುಟ್ಟುಹಾಕಿರುವ ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಇನ್ನಷ್ಟುವಿಸ್ತರಣೆಗೊಳ್ಳುವ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಘೋಷಿಸಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ಹೊರಡಿಸಿದೆ.
ರೋಗ ಹರಡುವಿಕೆ ನಿಯಂತ್ರಣದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಜಿನೆವಾದಲ್ಲಿ ತುರ್ತು ಸಭೆ ನಡೆಸಿತು. ಸಭೆಯ ಬಳಿಕ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಘೆಬ್ರೆಯೆಸಸ್, ‘ಈ ವ್ಯಾಧಿಯನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಲಾಗುತ್ತದೆ. ಈಗಾಗಲೇ ವೈರಾಣು ಸುಮಾರು 20 ದೇಶಗಳಿಗೆ ಹರಡಿದೆ. ಆರೋಗ್ಯ ಸೇವೆ ಅಷ್ಟುಚೆನ್ನಾಗಿರದ ದೇಶಗಳಿಗೆ ಈ ರೋಗ ವ್ಯಾಪಿಸಬಹುದಾದ ಭೀತಿ ಇರುವುದು ನಮಗೆ ಕಳವಳ ಸೃಷ್ಟಿಸಿದೆ’ ಎಂದಿದ್ದಾರೆ.
ಕೊರೋನಾ ವೈರಸ್ ಬಗ್ಗೆ ರಾಜ್ಯಾದ್ಯಂತ ಹೈಅಲರ್ಟ್!
ಚೀನಾ ವಿದೇಶಾಂಗ ವಕ್ತಾರೆ ಹುವಾ ಚುನ್ಯಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, ‘ರೋಗ ನಿಯಂತ್ರಣಕ್ಕೆ ಚೀನಾ ಸರ್ಕಾರ ಸಮಗ್ರ ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಸೋಂಕು ರೋಗದ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸುವ ವಿಶ್ವಾಸವಿದೆ. ರೋಗ ನಿಯಂತ್ರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಜತೆ ಸಂಪರ್ಕದಲ್ಲಿದ್ದೇವೆ’ ಎಂದರು.
ಈ ನಡುವೆ ಚೀನಾದಲ್ಲಿ ಕೊರೋನಾ ವೈರಸ್ ರೋಗಕ್ಕೆ ಬಲಿಯಾದವರ ಸಂಖ್ಯೆ ಶುಕ್ರವಾರ 213ಕ್ಕೇರಿದೆ. ಅಲ್ಲದೆ, ಸೋಂಕಿತರ ಸಂಖ್ಯೆ 9,692ಕ್ಕೆ ಹೆಚ್ಚಿದೆ. ರೋಗದ ಕೇಂದ್ರಬಿಂದುವಾದ ಹುಬೈ ಪ್ರಾಂತ್ಯದಲ್ಲಿ ಹೊಸದಾಗಿ 43 ಸಾವುಗಳು ಸಂಭವಿಸಿವೆ. ಹೀಗಾಗಿ ಸಾವಿನ ಸಂಖ್ಯೆ 200 ದಾಟಿದೆ. ಇದರ ಜತೆಗೆ 1,982 ಹೊಸ ಕೊರೋನಾ ವೈರಸ್ ಪ್ರಕರಣಗಳು ಖಚಿತಪಟ್ಟಿವೆ. ಹೀಗಾಗಿ ಸೋಂಕಿತರ ಸಂಖ್ಯೆ 9 ಸಾವಿರದ ಗಡಿ ಮೀರಿದೆ.
ಏನಿದು ತುರ್ತುಸ್ಥಿತಿ?
ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಸ್ಥಿತಿ ಘೋಷಿಸಿದರೆ, ಆಯಾ ದೇಶಗಳು ಗಡಿಯನ್ನು ಮುಚ್ಚುವುದು, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುವುದು, ವಿಮಾನಗಳನ್ನು ರದ್ದುಗೊಳಿಸುವುದು- ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಈ ಮೂಲಕ ವೈರಸ್ ಹಬ್ಬದಂತೆ ಸಂಘಟಿತ ಯತ್ನಗಳನ್ನು ನಡೆಸಲಾಗುತ್ತದೆ.
ಕೊರೋನಾ ವೈರಸ್ ಬಗ್ಗೆ ರಾಜ್ಯಾದ್ಯಂತ ಹೈಅಲರ್ಟ್!