ವಾಷಿಂಗ್ಟನ್(ಏ.18): ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲೂ ಹಬ್ಬಿಕೊಂಡಿರುವ ಕೊರೋನಾ ಸೋಂಕು, ಗುರುವಾರ ಒಂದೇ ದಿನ ದೇಶದ ವಿವಿಧ ಭಾಗಗಳಲ್ಲಿ 4591 ಜನರನ್ನು ಬಲಿಪಡೆದಿದೆ. ಇದು ಈವರೆಗೆ ಅಮೆರಿಕ ಸೇರಿದಂತೆ ವಿಶ್ವದ ಯಾವುದೇ ದೇಶದಲ್ಲಿ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸಾವಿನ ಪ್ರಮಾಣವಾಗಿದೆ. ಜೊತೆಗೆ ವಿಶ್ವದಲ್ಲಿ ಮೊದಲ ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಒಟ್ಟಾರೆ ದಾಖಲಾದ (3342) ಸಾವಿಗಿಂತಲೂ ಅಮೆರಿಕದ ಒಂದು ದಿನದ ಸಾವು ಹೆಚ್ಚು ಎಂಬುದು ಗಮನಾರ್ಹ.

ಅಮೆರಿಕದಲ್ಲಿ ಒಂದೇ ದಿನ 2,569 ಜನ ಸಾವನ್ನಪ್ಪಿದ್ದು, ಈವರೆಗಿನ ಗರಿಷ್ಠ ದೈನಂದಿನ ದಾಖಲಾಗಿತ್ತು. ಅಮೆರಿಕದಲ್ಲಿ ಫೆ.15ರಂದು ಮೊದಲ ಪ್ರಕರಣ ಪತ್ತೆಯಾಗಿದ್ದು, ಫೆ.29ರಂದು ಮೊದಲ ಬಲಿ ಪಡೆದಿತ್ತು. ಅದಾದ ನಂತರದಲ್ಲಿ ಈವರೆಗೆ ಒಟ್ಟು 678,210 ಮಂದಿಗೆ ತಗುಲಿದ್ದು, 35100 ಜನರನ್ನು ಬಲಿ ಪಡೆದಿದೆ. ಇನ್ನು 58000 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಲಾಕ್‌ಡೌನ್‌ ಬಳಿಕ ವೈರಸ್‌ ದ್ವಿಗುಣ ಪ್ರಮಾಣ ಇಳಿಕೆ: ಕೇಂದ್ರ ಸರ್ಕಾರ!

ಲಾಕ್‌ಡೌನ್‌ ತೆರವು:

ಈ ನಡುವೆ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವ ಮೊದಲೇ ಲಾಕ್‌ಡೌನ್‌ ತೆರವಿಗೆ ಅಧ್ಯಕ್ಷ ಟ್ರಂಪ್‌ ಮುಂದಾಗಿದ್ದಾರೆ. ಈ ಸಂಬಂಧ 3 ಹಂತದ ಮಾರ್ಗಸೂಚಿಗಳನ್ನು ಅವರು ಬಿಡುಗಡೆ ಮಾಡಿದ್ದಾರೆ. ಈ ವಿಚಾರದಲ್ಲಿ ಆಯಾ ರಾಜ್ಯಗಳ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಗವರ್ನರ್‌ಗಳೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

3 ಮಾರ್ಗಸೂಚಿ:

1. ಕೊರೋನಾ ಸೋಂಕಿನ ಪ್ರಕರಣಗಳು 14 ದಿನಗಳ ಅವಧಿಯಲ್ಲಿ ಕಡಿಮೆಯಾಗಿರುವುದನ್ನು ಗಮನಿಸಿ ಲಾಕ್‌ಡೌನ್‌ ತೆರವು ಮಾಡಬಹುದು.

2. ಸೋಂಕಿಗೆ ತುತ್ತಾಗುವ ಅಪಾಯವುಳ್ಳ ವ್ಯಕ್ತಿಗಳನ್ನು ರಕ್ಷಿಸಬೇಕು. ಟೆಲಿವರ್ಕ್ ಉತ್ತೇಜಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

3. ಉತ್ತಮ ನೈರ್ಮಲ್ಯ ಅಭ್ಯಾಸ ಬೆಳೆಸಿಕೊಳ್ಳಬೇಕು. ವ್ಯಕ್ತಿ- ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು.