ಬೀಜಿಂಗ್(ಏ.25)‌: ಕೊರೋನಾ ಸೋಂಕಿನ ಉಗಮ ಸ್ಥಾನವಾಗಿರುವ ಚೀನಾದಲ್ಲಿ ಶುಕ್ರವಾರ ಕೇವಲ 6 ಹೊಸ ಸೋಂಕು ದೃಢಪಟ್ಟಿವೆ. ಜನವರಿ ಬಳಿಕ ದಿನವೊಂದರಲ್ಲಿ 10ಕ್ಕಿಂತ ಕಡಿಮೆ ಹೊಸ ಪ್ರಕರಣ ದಾಖಲಾದ ಮೊದಲ ಉದಾಹರಣೆ ಇದು. ಜೊತೆಗೆ ಶುಕ್ರವಾರ ಕೂಡ ದೇಶದ ಯಾವುದೇ ಭಾಗದಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ. ಇದರೊಂದಿಗೆ ಸತತ 9 ದಿನ ಸಾವು ಸಂಭವಿಸದೇ ದೇಶ ಮತ್ತಷ್ಟುಸಮಾಧಾನ ಪಡುವಂತೆ ಆಗಿದೆ.

ಶುಕ್ರವಾರ ಬೆಳಕಿಗೆ ಬಂದ 6ರಲ್ಲಿ 4 ಪ್ರಕರಣಗಳು ಸ್ಥಳೀಯವಾಗಿ ಹಬ್ಬಿದ ಪ್ರಕರಣಗಳಾಗಿವೆ. ಉಳಿದ ಎರಡು ವಿದೇಶದಿಂದ ಬಂದವರದ್ದು ಎಂದು ಸರ್ಕಾರ ತಿಳಿಸಿದೆ. ಇದೇ ವೇಳೆ ಚೀನಾದಲ್ಲಿ ಕೊರೋನಾದ ಕೇಂದ್ರ ಸ್ಥಾನವಾಗಿದ್ದ ಹುಬೇ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 50ಕ್ಕಿಂತ ಕೆಳಗೆ ಬಂದಿದೆ.

ಹುಬೇನಲ್ಲಿ ಸತತ 20 ದಿನಗಳಿಂದ ಯಾವುದೇ ಹೊಸ ಪ್ರಕರಣ ಬೆಳಕಿಗೆ ಬಂದಿಲ್ಲ. ಚೀನಾದಲ್ಲಿ ಈವರೆಗೆ 82804 ಪ್ರಕರಣ ಬೆಳಕಿಗೆ ಬಂದಿದ್ದು, 4632 ಜನ ಸಾವನ್ನಪ್ಪಿದ್ದಾರೆ.