ವಾಷಿಂಗ್ಟನ್‌(ಮೇ.17): ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಇದೀಗ ಸಾವಿನ ಸಂಖ್ಯೆ 6 ಲಕ್ಷಕ್ಕೆ ತಲುಪಿದೆ. ಈ ಮೂಲಕ ಮತ್ತೊಂದು ಕರಾಳ ದಾಖಲೆ ಅಮೆರಿಕಕ್ಕೆ ಒಲಿದಿದೆ. ಜೊತೆಗೆ ಇಷ್ಟುಜನರ ಸಾವಿನೊಂದಿಗೆ ಅಮೆರಿಕದಲ್ಲಿ ಕನಿಷ್ಠ 45000 ಮಕ್ಕಳು ಇದೀಗ ತಮ್ಮ ತಂದೆ-ತಾಯಿ ಮತ್ತು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂಬ ಮತ್ತೊಂದು ದುರಂತ ಕಥೆಯೂ ಅಮೆರಿಕದಿಂದ ಬಂದಿದೆ.

ಏಷ್ಯಾದ ದೇಶಗಳಲ್ಲಿ ಚಾಲ್ತಿಯಲ್ಲಿರುವ ಅವಿಭಕ್ತ ಕುಟುಂಬಕ್ಕೆ ವಿರುದ್ಧವಾದ ಸಣ್ಣ ಕುಟುಂಬ ಪದ್ಧತಿಯೇ ಅಮೆರಿಕದಲ್ಲಿ ಹೆಚ್ಚು. ಈ ವಿಷಯವೇ ಇದೀಗ ಅಮೆರಿಕದ ಪಾಲಿಗೆ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ತಮ್ಮವರು ಎಂದು ಯಾರೂ ಇಲ್ಲದೆ ಮಕ್ಕಳು ಕಂಗಾಲಾಗಿ ಹೋಗಿದ್ದಾರೆ. ಹಲವು ಮಕ್ಕಳಿಗೆ ತಮ್ಮ ಪೋಷಕರು ಸಾವನ್ನಪ್ಪಿರುವ ವಿಷಯ ಕೂಡಾ ಗೊತ್ತಿಲ್ಲ. ಇಂಥ ಪರಿಸ್ಥಿತಿಯಿಂದ ಮಕ್ಕಳನ್ನು ಮತ್ತೆ ಸಹಜ ಸ್ಥಿತಿಗೆ ತರುವುದು ಬಲು ಸಂಕಷ್ಟದ ಕೆಲಸ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

"

ಮತ್ತೊಂದೆಡೆ ಕೆಲವು ಮಕ್ಕಳಿಗೆ ತಮ್ಮ ಪೋಷಕರು ಸಾವಿಗೀಡಾಗಿದ್ದಾರೆ ಎಂಬ ವಿಚಾರವೇ ಗೊತ್ತಿಲ್ಲ. ಇನ್ನೂ ಹಲವು ಮಕ್ಕಳು ತಮ್ಮ ಪೋಷಕರ ಮೊಬೈಲ್‌ ಸಂಖ್ಯೆಗೆ ಸಂದೇಶಗಳನ್ನು ಕಳಿಸುತ್ತಿದ್ದಾರೆ. ತಂದೆ, ತಾಯಿ, ಅಣ್ಣ, ತಂಗಿ, ಚಿಕ್ಕಮ್ಮ, ಚಿಕ್ಕಪ್ಪ ಸೇರಿದಂತೆ ಇನ್ನಿತರ ಪ್ರೀತಿ-ಪಾತ್ರರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಮಾನಸಿಕ ಸಾಮರ್ಥ್ಯ ವೃದ್ಧಿಗೆ ಅವರನ್ನು ಪುನಃ ಶಾಲೆಗೆ ಕರೆತರುವುದೇ ಮಾರ್ಗವಾಗಿದೆ ಎಂದು ಅಮೆರಿಕದ ಮಕ್ಕಳ ತಜ್ಞರು ಪ್ರತಿಪಾದಿಸುತ್ತಿದ್ದಾರೆ. ಪೋಷಕರ ಕಳೆದುಕೊಂಡ ಆಘಾತದಿಂದ ಮಕ್ಕಳು ಹೊರಬರದಿದ್ದರೆ ಕಲಿಕಾ ಸಾಮರ್ಥ್ಯ ಕುಸಿಯಲಿದೆ. ಹೀಗಾಗಿ ಶಾಲೆಗಳು ಮತ್ತು ಖಾಸಗಿ ಮಾನಸಿಕ ಸಲಹೆಗಾರರು ಇಂಥ ಮಕ್ಕಳ ನೆರವಿಗೆ ನಿಲ್ಲುವಂತೆ ಎನ್‌ಜಿಒಗಳಿಗೆ ಕರೆ ನೀಡಿದ್ದಾರೆ.

ಸೋಂಕು ನಿಯಂತ್ರಣಕ್ಕಾಗಿ ಶಾಲೆಗಳಲ್ಲೂ ಎಲ್ಲರೂ ಮಾಸ್ಕ್‌ ಧರಿಸುವಿಕೆ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ತರಗತಿಗಳಲ್ಲೇ ಮಧ್ಯಾಹ್ನದ ಊಟ ಮಾಡುವ ವ್ಯವಸ್ಥೆಗಳು ಮಕ್ಕಳಿಗೆ ಹೊಸತರಂತೆ ಭಾಸವಾಗಲಿದೆ. ಈ ಎಲ್ಲಾ ವಿದ್ಯಮಾನಗಳು ಅನಾಥ ಮಕ್ಕಳಲ್ಲಿ ಆತಂಕ ಮತ್ತು ಖಿನ್ನತೆಯನ್ನು ಇಮ್ಮಡಿಗೊಳಿಸಲಿದೆ ಎಂದು ಮಕ್ಕಳ ತಜ್ಞರು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona