ವಾಷಿಂಗ್ಟನ್(ಜು.06)‌: ಕೊರೋನಾ ವೈರಸ್‌ನ ಮೂಲ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ, ಚೀನಾದ ವುಹಾನ್‌ನ ವೈರಾಣು ಪ್ರಯೋಗಾಲಯಕ್ಕೆ 7 ವರ್ಷಗಳ ಹಿಂದೆ ಕೊರೋನಾ ರೀತಿಯ ವೈರಸ್‌ವೊಂದನ್ನು ಕಳುಹಿಸಿಕೊಡಲಾಗಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

2013ರಲ್ಲಿ ನೈಋುತ್ಯ ಚೀನಾದ ತಾಮ್ರದ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾರ್ಮಿಕರು ಬಾವಲಿಗಳಿಂದ ಸೋಂಕಿಗೆ ತುತ್ತಾಗಿ ಗಂಭೀರ ಸ್ವರೂಪದ ನ್ಯುಮೋನಿಯಾಕ್ಕೆ ತುತ್ತಾಗಿದ್ದರು. ಅವರಲ್ಲಿ ಮೂವರು ಸಾವನ್ನಪ್ಪಿದ್ದರು. ಬಳಿಕ ಈ ಗಣಿಯಿಂದ ಸಂಗ್ರಹಿಸಿದ ಮಾದರಿಗಳನ್ನು ವಿಜ್ಞಾನಿಗಳು ವುಹಾನ್‌ ಲ್ಯಾಬ್‌ಗೆ ಕಳುಹಿಸಿಕೊಟ್ಟಿದ್ದರು.

ಈಗ ಭೂತಾನ್‌ ಜೊತೆಗೂ ಚೀನಾ ಗಡಿ ಜಗಳ!

ಕೊರೋನಾ ವೈರಸ್‌ ರೀತಿಯ ವೈರಸ್‌ವೊಂದು ಬಾವಲಿಯಿಂದ ಮನುಷ್ಯನಿಗೆ ಹಬ್ಬಿದ್ದರಿಂದಲೇ ಈ ಸಾವು ಸಂಭವಿಸಿತ್ತು. ಬಳಿಕ ಯುಹಾನ್‌ ಪ್ರಾಂತ್ಯದಲ್ಲಿರುವ ಈ ಗಣಿಯಲ್ಲಿ ವುಹಾನ್‌ ವೈರಾಲಜಿ ಇನ್ಸ್‌ಸ್ಟಿಟ್ಯೂಟ್‌ನ ತಜ್ಞರೊಬ್ಬರು ವೈರಸ್‌ ಬಗ್ಗೆ ಅಧ್ಯಯನ ನಡೆಸಿದ್ದರು ಎಂದು ಸಂಡೇ ಟೈಮ್ಸ್‌ ವರದಿಯಲ್ಲಿ ತಿಳಿಸಲಾಗಿದೆ.