ಪ್ರಧಾನಿ ಹುದ್ದೆಗೆ ಪಕ್ಷದೊಳಗೂ ರಿಷಿ ಸುನಾಕ್‌ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. 48% ಸದಸ್ಯರ ಆಯ್ಕೆ ಸುನಾಕ್‌ ಆಗಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಲಂಡನ್‌ (ಜು.18): ಯಾರು ಬೇಕಾದರೂ ಪ್ರಧಾನಿಯಾಗಲಿ, ಆದರೆ ಭಾರತೀಯ ಮೂಲದ ರಿಷಿ ಸುನಾಕ್‌ ಮಾತ್ರ ಬೇಡ ಎಂದು ಬ್ರಿಟನ್‌ನ ಪ್ರಧಾನಿ ಬೋರಿಸ್‌ ಜಾನ್ಸನ್‌ ಹೇಳುತ್ತಿರುವುದರ ನಡುವೆಯೂ, ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದ ಸದಸ್ಯರಿಗೆ ರಿಷಿ ಅವರೇ ಅಚ್ಚುಮೆಚ್ಚಿನ ಆಯ್ಕೆಯಾಗಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಬೆಂಗಳೂರು ಮೂಲದ ಇಸ್ಫೋಸಿಸ್‌ ಕಂಪನಿಯ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ- ಸುಧಾಮೂರ್ತಿ ದಂಪತಿಯ ಅಳಿಯ ಆಗಿರುವ ರಿಷಿ ಸುನಾಕ್‌ ಅವರು ಒಬ್ಬ ಉತ್ತಮ ಪ್ರಧಾನಿಯಾಗಬಲ್ಲರು ಎಂದು ಕನ್ಸರ್ವೇಟಿವ್‌ ಪಕ್ಷದ ಶೇ.48ರಷ್ಟುಸದಸ್ಯರು ಅಭಿಪ್ರಾಯ ಹೇಳಿದ್ದಾರೆ ಎಂದು ಜೆಎಲ್‌ ಪಾರ್ಚ್‌ನ​ರ್‍ಸ್ ಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ ಎಂದು ‘ದ ಸಂಡೇ ಟೆಲಿಗ್ರಾಫ್‌’ ವರದಿ ಮಾಡಿದೆ. ಪ್ರಧಾನಿ ಹುದ್ದೆಗೆ ರಿಷಿ ಅವರ ಜತೆ ರೇಸ್‌ನಲ್ಲಿರುವ ವಿದೇಶಾಂಗ ಸಚಿವೆ ಲಿಜ್‌ ಟ್ರುಸ್‌ ಅವರು ಶೇ.39ರಷ್ಟುಸದಸ್ಯರ ಬೆಂಬಲದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಶೇ.33ರಷ್ಟುಜನರು ವ್ಯಾಪಾರ ಸಚಿವ ಪೆನ್ನಿ ಮಾರ್ಡೌಂಟ್‌ ಪರ ಇದ್ದಾರೆ. ಈಗಾಗಲೇ ಕನ್ಸರ್ವೇಟಿವ್‌ ಸಂಸದರು 2 ಸುತ್ತಿನ ಆಂತರಿಕ ಮತದಾನ ಪೂರೈಸಿದ್ದು, ಎರಡೂ ಸುತ್ತಿನಲ್ಲಿ ಸುನಾಕ್‌ ಜಯಿಸಿದ್ದಾರೆ. ಇನ್ನೂ ಹಲವು ಸುತ್ತಿನ ಮತದಾನ ಬಾಕಿ ಇದೆ.

ರಿಷಿ ಬಿಟ್ಟು ಯಾರು ಬೇಕಾದರೂ ಪ್ರಧಾನಿ ಆಗ್ಲಿ: ಬೋರಿಸ್‌ ಕ್ಯಾತೆ
ಬ್ರಿಟನ್‌ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆ ಭರದಿಂದ ಮುನ್ನಡೆಯುತ್ತಿರುವಾಗ ಹಂಗಾಮಿ ಪ್ರಧಾನಿ ಬೋರಿಸ್‌ ಜಾನ್ಸ್‌ನ್‌ ‘ಯಾರಿಗಾದರೂ ಬೆಂಬಲ ನೀಡಿ, ಆದರೆ ರಿಷಿ ಸುನಾಕ್‌ಗೆ ಮಾತ್ರ ಪ್ರಧಾನಿಯಾಗಬಾರದು’ ಎಂದು ತಮ್ಮ ಪಕ್ಷದ ಆಪ್ತ ಸಂಸದರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಜಾನ್ಸನ್‌ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ರಿಷಿ, ಹಲವು ಬಾರಿ ಬೋರಿಸ್‌ ಅವರನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ಜೊತೆಗೆ ತಮ್ಮ ವಿರುದ್ಧ ನಾನಾ ಆರೋಪ ಕೇಳಿಬಂದಗಲೂ ರಿಷಿ ತಮ್ಮ ನೆರವಿಗೆ ಬಂದಿಲ್ಲ. ಅಲ್ಲದೆ ತ,, ಆಡಳಿತ ವಿರೋಧಿಸಿ ಹಣಕಾಸು ಸಚಿವ ಸ್ಥಾನಕ್ಕೆ ರಿಷಿ ರಾಜೀನಾಮೆ ನೀಡಿದ ಬೆನ್ನಲ್ಲೇ ತಾವೂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂತು ಎಂದು ಆಕ್ರೋಶಗೊಂಡಿರುವ ಬೋರಿಸ್‌, ರಿಷಿ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಜಾನ್ಸನ್‌ ಪ್ರಧಾನಿ ರೇಸಿನಲ್ಲಿರುವ ಯಾವುದೇ ನಾಯಕನಿಗೆ ತಾವು ಬೆಂಬಲಿಸುವುದಿಲ್ಲ ಅಥವಾ ಚುನಾವಣೆಯಲ್ಲಿ ಯಾವುದೇ ರೀತಿ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಘೋಷಿಸಿದ್ದರು. ಆದರೆ ತಮ್ಮ ಬೆಂಬಲಿಗ ಸಂಸದರಿಗೆ ಯಾರನ್ನಾದರೂ ಪ್ರಧಾನಿಯಾಗಿ ಮಾಡಿ, ಆದರೆ ರಿಷಿ ಸುನಾಕ್‌ ಮಾತ್ರ ಪ್ರಧಾನಿಯಾಗಬಾರದು ಎಂದಿದ್ದಾರೆ ಎಂದು ಬ್ರಿಟನ್‌ ಮಾಧ್ಯಮಗಳು ವರದಿ ಮಾಡಿವೆ. ಸುನಾಕ್‌ ಬದಲು ಪೆನ್ನಿ ಮೊರ್ಡಂಟ್‌ ಅಥವಾ ಲೀಸ್‌ ಟ್ರಸ್‌ ಅವರು ಪ್ರಧಾನಿಯಾಗಲಿ ಎಂದು ಜಾನ್ಸನ್‌ ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.