* ರಫೇಲ್‌ ಡೀಲಲ್ಲಿ ಲಂಚ: ಫ್ರಾನ್ಸ್‌ನಲ್ಲಿ ತನಿಖೆ ಶುರು* ರಾಹುಲ್‌ ಹೇಳಿದ್ದು ನಿಜವಾಯ್ತು: ಕಾಂಗ್ರೆಸ್‌* ಎನ್‌ಜಿಒಗಳಿಗೆ ರಾಹುಲ್‌ ದಾಳ: ಬಿಜೆಪಿ ಕಿಡಿ

ನವದೆಹಲಿ(ಜು.04): ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿವಾದದ ಧೂಳು ಎಬ್ಬಿಸಿದ್ದ ‘ರಫೇಲ್‌ ವಿವಾದ’ಕ್ಕೆ ಮತ್ತೆ ಈಗ ಜೀವ ಬಂದಿದೆ. ಭಾರತ-ಫ್ರಾನ್ಸ್‌ ನಡುವೆ ನಡೆದ 36 ರಫೇಲ್‌ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದ ಬಗ್ಗೆ ಫ್ರಾನ್ಸ್‌ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಜೂ.14ರಂದೇ ನ್ಯಾಯಾಂಗ ತನಿಖೆ ಆರಂಭಗೊಂಡಿದ್ದು, ಹಾಲಿ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಿರುವುದು ಈಗ ಬೆಳಕಿಗೆ ಬಂದಿದೆ.

ಈ ಸಂಗತಿ ಹೊರಬಿದ್ದ ಬೆನ್ನಲ್ಲೇ 59000 ಕೋಟಿ ರು. ಮೊತ್ತದ ಈ ವ್ಯವಹಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಎನ್‌ಡಿಎ ಸರ್ಕಾರದ ವಿರುದ್ಧ ಕಳೆದ 5 ವರ್ಷಗಳಿಂದ ಆರೋಪಿಸುತ್ತಾ ಬಂದಿರುವ ಕಾಂಗ್ರೆಸ್‌ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಈ ಹಗರಣದ ತನಿಖೆಗೆ ಜಂಟಿ ಸದನ ಸಮಿತಿ (ಜೆಪಿಸಿ) ರಚಿಸಬೇಕೆಂದು ಆಗ್ರಹಿಸಿದೆ.

ಆದರೆ, ‘ಫ್ರಾನ್ಸ್‌ನಲ್ಲಿನ ತನಿಖೆ ಗಂಭೀರವಾದುದಲ್ಲ’ ಎಂದು ತಳ್ಳಿಹಾಕಿರುವ ಬಿಜೆಪಿ, ‘ಈ ವ್ಯವಹಾರದಲ್ಲಿ ಪ್ರತಿಸ್ಪರ್ಧಿ ಕಂಪನಿಗಳು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ’ ಎಂದು ಹೇಳಿದೆ.

ವೆಬ್‌ಸೈಟಿನಲ್ಲಿ ತನಿಖಾ ವರದಿ:

2016ರಲ್ಲಿ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿ ಹಾಗೂ ಭಾರತ ಸರ್ಕಾರದ ನಡುವೆ ನಡೆದ 36 ರಫೇಲ್‌ ಯುದ್ಧವಿಮಾನಗಳ ಖರೀದಿ ಒಪ್ಪಂದದಲ್ಲಿ ಡಸಾಲ್ಟ್‌ ಕಂಪನಿಯು 1 ದಶಲಕ್ಷ ಯುರೋ (ಸುಮಾರು .8.8 ಕೋಟಿ)ಗಳಷ್ಟುಲಂಚವನ್ನು ಭಾರತದ ಮಧ್ಯವರ್ತಿಗಳಿಗೆ ಪಾವತಿಸಿದೆ ಎಂದು ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ದಳದ ತನಿಖೆಯನ್ನು ಆಧರಿಸಿ ಮೀಡಿಯಾಪಾರ್ಟ್‌ ಎಂಬ ವೆಬ್‌ಸೈಟ್‌ ಕೆಲ ತಿಂಗಳ ಹಿಂದೆ ವರದಿ ಪ್ರಕಟಿಸಿತ್ತು. ಜೊತೆಗೆ, ಹಣಕಾಸು ಅಪರಾಧಗಳ ಕುರಿತು ಪರಿಣತಿ ಹೊಂದಿರುವ ಫ್ರಾನ್ಸ್‌ನ ಶೆರ್ಪಾ ಎಂಬ ಎನ್‌ಜಿಒ ಈ ಕುರಿತು ಫ್ರಾನ್ಸ್‌ ಸರ್ಕಾರಕ್ಕೆ ದೂರು ನೀಡಿತ್ತು. ಅದರನ್ವಯ ಈಗ ನ್ಯಾಯಾಂಗ ತನಿಖೆ ಆರಂಭಿಸಲಾಗಿದೆ.

ಜಂಟಿ ಸದನ ಸಮಿತಿ ರಚಿಸಿ- ಕಾಂಗ್ರೆಸ್‌:

ಫ್ರಾನ್ಸ್‌ನಲ್ಲಿ ರಫೇಲ್‌ ವಿವಾದವನ್ನು ನ್ಯಾಯಾಂಗ ತನಿಖೆಗೆ ಆದೇಶಿಸುತ್ತಿದ್ದಂತೆ ಇತ್ತ ಕಾಂಗ್ರೆಸ್‌ ಪಕ್ಷ ಕೇಂದ್ರ ಸರ್ಕಾರದ ವಿರುದ್ಧದ ತನ್ನ ಆರೋಪಕ್ಕೆ ಮರುಜೀವ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜಂಟಿ ಸದನ ಸಮಿತಿ ರಚಿಸಿ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿದೆ. ‘ರಫೇಲ್‌ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿರುವುದು ಈಗ ಸ್ಪಷ್ಟವಾಗಿದೆ. ರಾಹುಲ್‌ ಗಾಂಧಿ ಹೇಳುತ್ತಿದ್ದುದು ನಿಜವೆಂದು ಸಾಬೀತಾಗಿದೆ. ಇದರಲ್ಲಿನ ಸತ್ಯ ಹೊರಗೆಳೆಯಲು ಇರುವ ಏಕೈಕ ದಾರಿಯೆಂದರೆ ಜೆಪಿಸಿ ತನಿಖೆ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ದಾಳವಾಗಿ ರಾಹುಲ್‌ ಬಳಕೆ​- ಬಿಜೆಪಿ:

ಕಾಂಗ್ರೆಸ್‌ನ ಆಗ್ರಹದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ, ‘ಪ್ರತಿಸ್ಪರ್ಧಿ ಕಂಪನಿಗಳು ರಾಹುಲ್‌ ಗಾಂಧಿ ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ. ರಫೇಲ್‌ ವ್ಯವಹಾರದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸುವುದು ಭಾರತವನ್ನು ದುರ್ಬಲಗೊಳಿಸುವ ಯತ್ನ. ಫ್ರಾನ್ಸ್‌ನಲ್ಲಿ ಒಂದು ಎನ್‌ಜಿಒ ನೀಡಿದ ದೂರನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಇದು ಭಾರತದಲ್ಲಿ ಯಾವುದಾದರೂ ದೂರು ಬಂದರೆ ‘ಸೂಕ್ತ ಕ್ರಮ ಕೈಗೊಳ್ಳುವುದು’ ಎಂದು ಫೈಲ್‌ ಮೇಲೆ ಬರೆಯುವಷ್ಟೇ ಸಾಮಾನ್ಯ ಸಂಗತಿ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಏನಿದು ವಿವಾದ?

ಯುಪಿಎ ಸರ್ಕಾರದ ಅವಧಿಯಲ್ಲಿ ಫ್ರಾನ್ಸ್‌ನಿಂದ 126 ರಫೇಲ್‌ ಯುದ್ಧವಿಮಾನ ಖರೀದಿಸಲು ಸುಮಾರು ಏಳು ವರ್ಷಗಳ ಕಾಲ ವಿಫಲ ಯತ್ನ ನಡೆದಿತ್ತು. ನಂತರ 2016ರಲ್ಲಿ ಎನ್‌ಡಿಎ ಸರ್ಕಾರ 59,000 ಕೋಟಿ ರು.ಗೆ 36 ರಫೇಲ್‌ ಖರೀದಿಸಲು ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಶನ್‌ ಜೊಗೆ ಒಪ್ಪಂದ ಮಾಡಿಕೊಂಡಿತು. ಆದರೆ, ಯುಪಿಎ ಅವಧಿಯಲ್ಲಿ ಪ್ರತಿ ವಿಮಾನಕ್ಕೆ 526 ಕೋಟಿ ರು. ನೀಡಲು ಒಪ್ಪಂದ ಮಾಡಿಕೊಂಡಿದ್ದನ್ನು ಬದಲಿಸಿ ಎನ್‌ಡಿಎ ಸರ್ಕಾರ ಪ್ರತಿ ವಿಮಾನಕ್ಕೆ 1670 ಕೋಟಿ ರು. ನೀಡಲು ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು 2016ರಿಂದ ಕಾಂಗ್ರೆಸ್‌ ಪಕ್ಷ ಆರೋಪಿಸುತ್ತಾ ಬಂದಿತ್ತು. 2019ರ ಲೋಕಸಭೆ ಚುನಾವಣೆಗೂ ಮೊದಲು ರಾಹುಲ್‌ ಗಾಂಧಿ ಈ ವಿವಾದವನ್ನು ದೊಡ್ಡ ಮಟ್ಟದಲ್ಲಿ ಪ್ರಸ್ತಾಪಿಸಿದ್ದರು.