ವೆನಿಜುವೆಲಾ ಅಧ್ಯಕ್ಷ ಮಡುರೋ ಅವರಿಗಾದ ಗತಿಯೇ ಕೊಲಂಬಿಯಾ ಅಧ್ಯಕ್ಷರಿಗೂ ಬರಬಹುದು ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆಗೆ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಬನ್ನಿ ನನ್ನನ್ನು ಹಿಡಿದುಕೊಂಡು ಹೋಗಿ ಎಂದು ನೇರಾನೇರ ಸವಾಲೆಸೆದಿದ್ದಾರೆ.

ಬಗೋಟಾ: ಡ್ರಗ್ಸ್‌ ಭಯೋತ್ಪಾದನೆ ನಿಲ್ಲಿಸದಿದ್ದರೆ ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋ ಅವರಿಗಾದ ಗತಿಯೇ ಕೊಲಂಬಿಯಾ ಅಧ್ಯಕ್ಷರಿಗೂ ಬರಬಹುದು ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆಗೆ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಬನ್ನಿ ನನ್ನನ್ನು ಹಿಡಿದುಕೊಂಡು ಹೋಗಿ. ನಿಮಗಾಗಿಯೇ ಇಲ್ಲಿ ಕಾಯುತ್ತಿದ್ದೇನೆ ಎಂದು ನೇರಾನೇರ ಸವಾಲೆಸೆದಿದ್ದಾರೆ. ತಮ್ಮ ಬಂಧನಕ್ಕೂ ಮೊದಲು ಮಡುರೋ ಸಹ ಇದೇ ರೀತಿ ತೊಡೆತಟ್ಟಿದ್ದು ವಿಶೇಷ.

ಮಡುರೋ ದಂಪತಿಯನ್ನು ಸೆರೆಹಿಡಿದ ಅಮೆರಿಕದ ಕ್ರಮ ಖಂಡಿಸಿದ ಪೆಟ್ರೋ

ಮಡುರೋ ದಂಪತಿಯನ್ನು ಸೆರೆಹಿಡಿದ ಅಮೆರಿಕದ ಕ್ರಮವನ್ನು ಮಂಗಳವಾರ ಖಂಡಿಸಿದ ಪೆಟ್ರೋ, ‘ಅಮೆರಿಕ ಬಾಂಬ್ ಹಾಕಿದರೆ, ನಮ್ಮ ರೈತರು ಬೆಟ್ಟಗಳಲ್ಲಿ ಸಾವಿರಾರು ಗೆರಿಲ್ಲಾ ಯೋಧರಾಗಿ ಮಾರ್ಪಡುತ್ತಾರೆ. ನಮ್ಮ ದೇಶದ ದೊಡ್ಡ ಭಾಗದ ಜನರು ಪ್ರೀತಿಸುವ ಮತ್ತು ಗೌರವಿಸುವ ಅಧ್ಯಕ್ಷರನ್ನು ಬಂಧಿಸಿದರೆ, ಅದು ಜನರ ‘ಜಾಗ್ವಾರ್’ ಅನ್ನು (ಉಗ್ರ ಕ್ರೋಧವನ್ನು) ಬಿಡುಗಡೆ ಮಾಡುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಯ್ನಾಡಿಗಾಗಿ ಮತ್ತೆ ಆಯುಧವನ್ನು ಹಿಡಿಯುತ್ತೇನೆ

ಜೊತೆಗೆ, ‘ನಾನು ಆಯುಧ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ. ಆದರೆ ತಾಯ್ನಾಡಿಗಾಗಿ ಮತ್ತೆ ಆಯುಧವನ್ನು ಹಿಡಿಯುತ್ತೇನೆ. ಬನ್ನಿ, ನನ್ನನ್ನು ಹಿಡಿದುಕೊಂಡು ಹೋಗಿ. ನಿಮಗಾಗಿಯೇ ಕಾಯುತ್ತಾ ಕುಳಿತಿದ್ದೇನೆ’ ಎಂದು ಟ್ರಂಪ್‌ಗೆ ಸವಾಲೆಸೆದಿದ್ದಾರೆ.