ಬೀಜಿಂಗ್‌ (ಡಿ.18): ಚಂದ್ರನ ಅಂಗಳದಿಂದ ಕಲ್ಲು ಹಾಗೂ ಮಣ್ಣಿನ ಮಾದರಿಯನ್ನು ಹೊತ್ತ ಚೀನಾದ ನೌಕೆಯೊಂದು ಗುರುವಾರ ಮುಂಜಾನೆ ಭೂಮಿಗೆ ಬಂದಿಳಿದಿದೆ. ಇದರೊಂದಿಗೆ ಚಂದ್ರನ ಅಂಗಳದಿಂದ 44 ವರ್ಷಗಳ ಬಳಿಕ ಮಾದರಿ ಸಂಗ್ರಹಿಸಿದ ವಿಶ್ವದ ಮೊದಲ ದೇಶ ಹಾಗೂ ಒಟ್ಟಾರೆ ಇಂತಹ ಸಾಹಸ ನಡೆಸಿದ ವಿಶ್ವದ ಮೂರನೇ ದೇಶ ಎಂಬ ಹಿರಿಮೆಗೆ ಚೀನಾ ಭಾಜನವಾಗಿದೆ.

1976ರಲ್ಲಿ ರಷ್ಯಾದ ಲೂನಾ 24 ನೌಕೆ ಚಂದ್ರನಿಂದ ಮಣ್ಣಿನ ಮಾದರಿಯನ್ನು ತಂದಿತ್ತು. ಆನಂತರ ಯಾವುದೇ ದೇಶ ಈ ಸಾಹಸಕ್ಕೆ ಕೈ ಹಾಕಿರಲಿಲ್ಲ. ರಷ್ಯಾಕ್ಕೂ ಮುನ್ನ ಅಮೆರಿಕ 1969 ಹಾಗೂ 1972ರಲ್ಲಿ ಕಲ್ಲಿನ ಮಾದರಿಗಳನ್ನು ಅಮೆರಿಕ ಸಂಗ್ರಹಿಸಿತ್ತು.

ಅನ್ಯಗ್ರಹದ ಜೊತೆ ಸ್ನೇಹ ಸಂಪಾದಿಸಲು ಮುಂದಾದ ಎಲನ್ ಮಸ್ಕ್; ಏನಿದು ಹೊಸ ಟಾಸ್ಕ್? ...

ಮಾದರಿ ಸಂಗ್ರಹಿಸುವ ಉದ್ದೇಶದಿಂದ ನ.24ರಂದು ಚೀನಾ ತನ್ನ ‘ಚಾಂಗ್‌-5’ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸಿತ್ತು. ಚಂದ್ರನ ಅಂಗಳದಲ್ಲಿ ಡಿ.1ರಂದು ಇಳಿದಿದ್ದ ನೌಕೆ, ಗುಳಿ ತೋಡಿ ಧೂಳು ಹಾಗೂ ಕಲ್ಲುಗಳನ್ನು ಸಂಗ್ರಹಿಸಿತ್ತು. ಬಳಿಕ ಅಲ್ಲಿಂದ ಟೇಕಾಫ್‌ ಆಗಿ ಇದೀಗ ಭೂಮಿಗೆ ತಲುಪಿದೆ. ಸ್ಥಳೀಯ ಕಾಲಮಾನ 1.59ಕ್ಕೆ ಉತ್ತರ ಚೀನಾದಲ್ಲಿ ಬಂದಿಳಿದಿದೆ.