ಬೀಜಿಂಗ್(ಜ.09)‌: ಕೊರೋನಾ ವಿರುದ್ಧ ಹೋರಾಡಲು ಚೀನಾ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ವಿಶ್ವದಲ್ಲೇ ಅತ್ಯಂತ ಅಸುರಕ್ಷಿತ. ಈ ಲಸಿಕೆಯನ್ನೇನಾದರೂ ಪಡೆದರೆ 73 ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಎಂದು ಸ್ವತಃ ಚೀನಾದ ಲಸಿಕೆ ತಜ್ಞರೊಬ್ಬರು ಹೇಳಿರುವುದು ಸಂಚಲನಕ್ಕೆ ಕಾರಣವಾಗಿದೆ. ಈ ಹೇಳಿಕೆ ಭಾರಿ ವೈರಲ್‌ ಆದ ಬೆನ್ನಲ್ಲೇ ಆ ತಜ್ಞ ಉಲ್ಟಾಹೊಡೆದಿದ್ದು, ಲಸಿಕೆ ಸುರಕ್ಷಿತವಾಗಿದೆ ಎಂದು ತೇಪೆ ಹಚ್ಚಲು ಪ್ರಯತ್ನಿಸಿದ್ದಾರೆ.

ವಿಶ್ವಕ್ಕೇ ಕೊರೋನಾ ಹಬ್ಬಿಸಿದ ಕುಖ್ಯಾತಿ ಹೊಂದಿರುವ ಚೀನಾ ಕೊರೋನಾ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದೆ. ಸರ್ಕಾರಿ ಸ್ವಾಮ್ಯದ ಸಿನೋಫಾರ್ಮಾ ಕಂಪನಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯ ವಿತರಣೆ ಈಗಾಗಲೇ ಆರಂಭವಾಗಿದೆ. ಈ ಲಸಿಕೆ ಕುರಿತು ಟ್ವೀಟರ್‌ ರೀತಿಯ ಚೀನಿ ಸಾಮಾಜಿಕ ಮಾಧ್ಯಮವಾಗಿರುವ ವೀಬೋದಲ್ಲಿ ಶಾಂಘೈನ ಡಾ

ಟಾವೋ ಲೀನಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಲಸಿಕೆ ವಿಶ್ವದ ಉಳಿದೆಲ್ಲಾ ಲಸಿಕೆಗಳಿಗಿಂತ ಅಸುರಕ್ಷಿತವಾಗಿದ್ದು, ಹೆಚ್ಚಿನ ಅಡ್ಡ ಪರಿಣಾಮಗಳನ್ನು ಹೊಂದಿದೆ. ಲಸಿಕೆ ಹಾಕಿಸಿಕೊಂಡ ಜಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಜತೆಗೆ ಲಸಿಕೆ ಸ್ವೀಕಾರ ಬಳಿಕ ತಲೆನೋವು, ಅಧಿಕ ರಕ್ತದೊತ್ತಡ, ದೃಷ್ಟಿ, ರುಚಿಯ ಸಮಸ್ಯೆ, ಮೂತ್ರ ನಿಯಂತ್ರಣ ತಪ್ಪುವಂತಹ ಸೈಡ್‌ ಎಫೆಕ್ಟ್ಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಿದ್ದರು. ಅವರ ಈ ಅಭಿಪ್ರಾಯ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು.

ಬೆನ್ನಲ್ಲೇ ಡಾ| ಟಾವೋ ಅವರು ವೀಬೋದಲ್ಲಿನ ತಮ್ಮ ಕಮೆಂಟ್‌ ಅನ್ನು ಅಳಿಸಿ ಹಾಕಿದ್ದಾರೆ. ಅಲ್ಲದೆ ಚೀನಾ ಲಸಿಕೆ ಅತ್ಯಂತ ಸುರಕ್ಷಿತವಾಗಿದೆ. ನಾನು ವ್ಯಂಗ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಅದನ್ನೇ ವಿದೇಶಿ ಮಾಧ್ಯಮಗಳು ತಿರುಚಿವೆ. ಈಗಾಗಲೇ ಸಿನೋಫಾರ್ಮಾ ಲಸಿಕೆಯ ಮೊದಲ ಡೋಸ್‌ ಪಡೆದಿದ್ದೇನೆ. ಎರಡನೇ ಡೋಸ್‌ ಅನ್ನು ಕೂಡ ಪಡೆಯಲಿದ್ದೇನೆ. ನನ್ನ ಪದಗಳಿಂದ ನೋವಾಗಿದ್ದರೆ ದೇಶವಾಸಿಗಳ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಸಿನೋಫಾರ್ಮಾ ಕಂಪನಿ ಡಿ.31ರಂದು ತನ್ನ ಲಸಿಕೆಯನ್ನು ಜನಸಾಮಾನ್ಯರ ಬಳಕೆಗೆ ಬಿಡುಗಡೆ ಮಾಡಿದೆ. ಆದರೆ ಅದರ ಪ್ರಯೋಗ ಕುರಿತ ವರದಿಯನ್ನು ಪ್ರಕಟಿಸಿಲ್ಲ. ಈ ಲಸಿಕೆ ಶೇ.79.34ರಷ್ಟುಪರಿಣಾಮಕಾರಿ ಎಂದು ಕಂಪನಿ ಹೇಳಿಕೊಂಡಿದೆ. ಜನವರಿಯಲ್ಲಿ 5 ಕೋಟಿ ಜನರಿಗೆ ಈ ಲಸಿಕೆ ಹಾಕಲು ಚೀನಾ ಉದ್ದೇಶಿಸಿದೆ.