* ಅಮೆರಿಕ ಬಿಟ್ಟು ಹೋದ ಯೋಧರ ಮಾಹಿತಿ ಸಂಗ್ರಹಿಸಿದ ಚೀನಾ* ಆಫ್ಘ​ನ್‌​ನ​ಲ್ಲಿ ಚೀನಾ ವಾಯುನೆಲೆ?* ರಹಸ್ಯವಾಗಿ ಬಗ್ರಾಂ ವಾಯುನೆಲೆ ಪರಿಶೀಲಿಸಿದ ಚೀನಾ ಅಧಿಕಾರಿಗಳು

ಕಾಬೂಲ್‌(ಸೆ.21): ಅಫ್ಘಾನಿಸ್ತಾನದಿಂದ ಅಮೆರಿಕ ಕಾಲ್ಕಿತ್ತ ಬಳಿಕ ತಾಲಿಬಾನಿ ಸರ್ಕಾರದ ಜೊತೆಗೆ ಆತ್ಮೀಯ ಸ್ನೇಹ ಪ್ರದರ್ಶಿಸುತ್ತಿರುವ ಚೀನಾ, ಕಾಬೂಲ್‌ನ ಬಗ್ರಾಂ ವಾಯುನೆಲೆಗೆ ಇತ್ತೀಚೆಗೆ ರಹಸ್ಯವಾಗಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ತಾಲಿಬಾನಿ ಉಗ್ರರ ಜೊತೆಗೆ ಮೈತ್ರಿ ಮಾಡಿಕೊಂಡು ಆ ದೇಶವನ್ನು ಹಿಡತಕ್ಕೆ ಪಡೆಯಲು ನೆರೆಯ ಚೀನಾ ಮತ್ತು ಪಾಕಿಸ್ತಾನ ಒಂದಾದ ಮೇಲೊಂದರಂತೆ ಯತ್ನ ನಡೆಸಿರುವಾಗಲೇ ನಡೆದಿರುವ ಈ ಬೆಳವಣಿಗೆ ಸಹಜವಾಗಿ ಭಾರತದ ಆತಂಕಕ್ಕೆ ಕಾರಣವಾಗಿದೆ.

ಬಗ್ರಾಂ ವಾಯುನೆಲೆ, ಅಮೆರಿಕ ಪಡೆಗಳು ಅಫ್ಘಾನಿಸ್ತಾನದಲ್ಲಿ ಹೊಂದಿದ್ದ ಅತಿದೊಡ್ಡ ನೆಲೆಯಾಗಿತ್ತು. ಕಳೆದ ವಾರ ಚೀನಾದ ಗುಪ್ತಚರ ಮತ್ತು ಸೇನೆಯ ನಿಯೋಗವೊಂದು ಪಾಕಿಸ್ತಾನದ ಮೂಲಕವಾಗಿ ಕಾಬೂಲ್‌ಗೆ ಆಗಮಿಸಿ ವಾಯುನೆಲೆಯನ್ನು ಪರಿಶೀಲಿಸಿರುವ ವಿಷಯ ಬೆಳಕಿಗೆ ಬಂದಿದೆ. ಈ ಭೇಟಿ ವೇಳೆ ಅಮೆರಿಕ ಬಿಟ್ಟುಹೋಗಿರುವ ಸಾಕ್ಷ್ಯ ಮತ್ತು ಯೋಧರ ರಹಸ್ಯ ಮಾಹಿತಿಯನ್ನು ಪಡೆಯಲು ಚೀನಾ ನಿಯೋಗ ಯತ್ನಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಲಿಬಾನ್‌ ಮತ್ತು ಪಾಕ್‌ ಜೊತೆಗೂಡಿ ಬಗ್ರಾಂನಲ್ಲಿ ಗುಪ್ತಚರ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಇರಾದೆಯಲ್ಲಿ ಚೀನಾ ಇದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಭವಿಷ್ಯದಲ್ಲಿ ಪಾಕಿಸ್ತಾನದ ಜೊತೆಗೂಡಿ ತನ್ನ ವಾಯುನೆಲೆಯೊಂದನ್ನು ಇಲ್ಲಿ ಸ್ಥಾಪಿಸುವ ಯತ್ನದ ಭಾಗವಾಗಿಯೂ ಈ ಭೇಟಿ ನಡೆದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಚೀನಾ ಮತ್ತು ಪಾಕಿಸ್ತಾನ ಈಗಾಗಲೇ ಚಾಚಿರುವ ಸ್ನೇಹದ ಹಸ್ತಕ್ಕೆ ತಾಲಿಬಾನ್‌ ಉಗ್ರ ಸರ್ಕಾರ ಕೂಡಾ ಜೈಕಾರ ಹಾಕಿದೆ. ದೇಶದ ಬೆಳವಣಿಗೆಯಲ್ಲಿ ಚೀನಾ ಪಾತ್ರ ದೊಡ್ಡದು ಎಂದು ಈಗಾಗಲೇ ತಾಲಿಬಾನ್‌ ಉಗ್ರರು ಹೇಳಿದ್ದಾರೆ. ಹೀಗಾಗಿ ಸಹಜವಾಗಿಯೇ ಈ ಬೆಳವಣಿಗೆ ಭಾರತದ ಆತಂಕಕ್ಕೆ ಕಾರಣವಾಗಿದೆ.

ಬಗ್ರಾಂ ನೆಲೆಯಲ್ಲಿ ಚೀನಾ ಮತ್ತು ಪಾಕಿಸ್ತಾನದ ಯಾವುದೇ ಇರುವಿಕೆ, ಈ ವಲಯದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಲು ಕಾರಣವಾಗಬಹುದು ಎಂಬ ಆತಂಕ ಭಾರತದ್ದು. ಹೀಗಾಗಿಯೇ ಅಫ್ಘಾನಿಸ್ತಾನದಲ್ಲಿನ ಎಲ್ಲಾ ಬೆಳವಣಿಗೆಯನ್ನು ಭಾರತದ ಭದ್ರತಾ ಸಂಸ್ಥೆಗಳು ಹದ್ದಿನ ಕಣ್ಣಿನಿಂದ ಗಮನಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.