ಬೀಜಿಂಗ್‌ (ಅ.22): ಜಾಗತಿಕ ಉಪಗ್ರಹ ಉಡ್ಡಯನ ಮಾರುಕಟ್ಟೆಯಲ್ಲಿ ಭಾರತದ ಇಸ್ರೋ ಸಾಧನೆ ನೋಡಿ ಕಂಗೆಟ್ಟಿದ್ದ ನೆರೆಯ ಚೀನಾ, ಇದೀಗ ಇಸ್ರೋಗೆ ಸಡ್ಡು ಹೊಡೆಯಲೆಂದೇ ವಾಣಿಜ್ಯ ಉದ್ದೇಶದ ಅಗ್ಗದ ರಾಕೆಟ್‌ಗಳನ್ನು ಬಿಡುಗಡೆ ಮಾಡಿದೆ. ಇದು ದೇಶ ವಿದೇಶಗಳ ಉಪಗ್ರಹಗಳನ್ನು ಅಗ್ಗದ ದರದಲ್ಲಿ ಉಡ್ಡಯನ ಮಾಡುವ ಮೂಲಕ ನಿಧನಾನವಾಗಿ ಈ ಕ್ಷೇತ್ರದಲ್ಲಿ ಬೆಳೆಯುತ್ತಿದ್ದ ಇಸ್ರೋದ ಅಂಗಸಂಸ್ಥೆಯಾದ ಆ್ಯಂಟ್ರಿಕ್ಸ್‌ಗೆ ಮುಂದಿನ ದಿನಗಳಲ್ಲಿ ದೊಡ್ಡ ಸವಾಲು ಒಡ್ಡಲಿದೆ ಎನ್ನಲಾಗಿದೆ.

ಚೀನಾದ ಬಾಹ್ಯಾಕಾಶ ಸಂಸ್ಥೆಯಾದ ಚೀನಾ ನ್ಯಾಷನಲ್‌ ಸ್ಪೇಸ್‌ ಅಡ್ಮಿನಿಸ್ಪ್ರೇಷನ್‌ನ ಅಂಗಸಂಸ್ಥೆಯಾದ ಚೈನಾ ರಾಕೆಟ್‌ ಹೊಸ ರಾಕೆಟ್‌ ಅನ್ನು ಅನಾವರಣಗೊಳಿಸಿದೆ. 2017ರಲ್ಲಿ ಇಸ್ರೋ ಅಮೆರಿಕದ 96 ಸೇರಿದಂತೆ ಒಮ್ಮೆಗೆ 106 ಉಪಗ್ರಹಗಳನ್ನು ಹಾರಿಬಿಟ್ಟು ದಾಖಲೆ ನಿರ್ಮಿಸಿದಾಗ, ಚೀನಾ ಸರ್ಕಾರದ ಮುಖವಾಣಿ ಪತ್ರಿಕೆಯಾದ ಗ್ಲೋಬಲ್‌ ಟೈಮ್ಸ್‌, ಜಾಗತಿಕ ಉಪಗ್ರಹ ಉಡ್ಡಯನ ಮಾರುಕಟ್ಟೆಯಲ್ಲಿ ಭಾರತಕ್ಕಿಂತ ಚೀನಾ ಹಿಂದೆ ಬಿದ್ದಿದೆ ಎಂದು ಎಚ್ಚರಿಕೆ ನೀಡಿತ್ತು. ಈ ವಿಷಯದಲ್ಲಿ ಚೀನಾ ಸಾಕಷ್ಟುಪಾಠ ಕಲಿಸಬೇಕಾದ ಅಗತ್ಯವಿದೆ ಎಂದು ಸೂಚಿಸಿತ್ತು. ಅದರ ಬೆನ್ನಲ್ಲೇ ಇದೀಗ ಟೆಂಗ್ಲಾಂಗ್‌ ಲಿಕ್ವಿಡ್‌ ರಾಕೆಟ್‌ಗಳನ್ನು ಅನಾವರಣಗೊಳಿಸಿದೆ. ಈ ರಾಕೆಟ್‌ ಒಂದು ಕೆಜಿ ತೂಕದ ವಸ್ತುವನ್ನು ಕೇವಲ 3.5 ಲಕ್ಷ ರು. ವೆಚ್ಚದಲ್ಲಿ ಗಗನಕ್ಕೆ ಕೊಂಡೊಯ್ಯಬಲ್ಲದಾಗಿದೆ. ಈ ರಾಕೆಟ್‌ 2021ರಲ್ಲಿ ತನ್ನ ಮೊದಲ ಉಡ್ಡಯನ ಮಾಡುವ ನಿರೀಕ್ಷೆ ಇದೆ.

ಸ್ಮಾರ್ಟ್‌ ಡ್ರ್ಯಾಗನ್‌ ಸೀರಿಸ್‌ನಲ್ಲಿ ಚೀನಾ ಎಸ್‌ಡಿ 1, ಎಸ್‌ಡಿ 2 ಮತ್ತು ಎಸ್‌ಡಿ 3 ರಾಕೆಟ್‌ಗಳನ್ನು ಬಿಡುಗಡೆ ಮಾಡಲಿದೆ. ಈ ಪೈಕಿ ಎಸ್‌ಡಿ 1 200 ಕೆಜಿವರೆಗಿನ ಉಪಗ್ರಹ, ಎಸ್‌ಡಿ 2 500 ಕೆಜಿವರೆಗಿನ ಉಪಗ್ರಹ ಮತ್ತು ಎಸ್‌ಡಿ 3 ಉಪಗ್ರಹ 1500 ಕೆಜಿವರೆಗಿನ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಬಲ್ಲ ಸಾಮರ್ಥ್ಯ ಹೊಂದಿರಲಿವೆ.

5 ಲಕ್ಷ ಕೋಟಿ ಮಾರುಕಟ್ಟೆ

ಬಾಹ್ಯಾಕಾಶ ಉದ್ಯಮದ ಲೆಕ್ಕಾಚಾರದ ಪ್ರಕಾರ 2030ರೊಳಗೆ ವಿಶ್ವದ ವಿವಿಧ ದೇಶಗಳು 11000ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಗಾತ್ರದ ಉಪಗ್ರಹಗಳನ್ನು ವಿವಿಧ ಕಕ್ಷೆಗೆ ಸೇರಿಸಲು ಉದ್ದೇಶಿಸಿವೆ. ಈ ಉಪಗ್ರಹಗಳ ಉಡ್ಡಯನ ಮಾರುಕಟ್ಟೆಸುಮಾರು 5 ಲಕ್ಷ ಕೋಟಿ ರು. ಎಂದು ಅಂದಾಜಿಸಲಾಗಿದೆ. ಈ ಉಡ್ಡಯನ ಮಾರುಕಟ್ಟೆಯಲ್ಲಿ ವಿಶ್ವದ ಹಲವು ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಇವೆಯಾದರೂ, ಅಗ್ಗದ ವೆಚ್ಚದ ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ವಿಶ್ವದ ವಿವಿಧ ದೇಶಗಳು ಇಸ್ರೋದ ರಾಕೆಟ್‌ ಅನ್ನೇ ತಮ್ಮ ಉಡ್ಡಯನಕ್ಕೆ ಆಯ್ಕೆ ಮಾಡಿಕೊಳ್ಳುತ್ತಿವೆ. ಇದು ಸಹಜವಾಗಿಯೇ ಚೀನಾದ ಗಮನ ಸೆಳೆದಿತ್ತು.