ನವದೆಹಲಿ(ಜೂ.21): ಪಾಕಿಸ್ತಾನ ಹಾಗೂ ನೇಪಾಳಕ್ಕೆ ಕುಮ್ಮಕ್ಕು ನೀಡಿ ಭಾರತದ ವಿರುದ್ದ ಎತ್ತಿ ಕಟ್ಟಲು ಯಶಸ್ವಿಯಾಗಿರುವ ಚೀನಾ ಇದೀಗ ಭಾರತದ ಮತ್ತೊಂದು ಸ್ನೇಹಿತ ರಾಷ್ಟ್ರ ಬಾಂಗ್ಲಾದೇಶವನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮುಂದಾಗಿದೆ. ಇದರ ಆರಂಭಿಕ ಹಂತವಾಗಿ ಬಾಂಗ್ಲಾದೇಶದಿಂದ ಚೀನಾಕ್ಕೆ ರಫ್ತು ಆಗುವ ಉತ್ಪನ್ನಗಳ ಮೇಲೆ ಶೇ.97ರಷ್ಟುಸುಂಕ ವಿನಾಯತಿಗೆ ಚೀನಾ ಮುಂದಾಗಿದೆ.

ಹಿಂದುಳಿದ ದೇಶ ಎಂದು ಪರಿಗಣಿಸಿ ನಮ್ಮ ಉತ್ಪನ್ನಗಳ ಮೇಲೆ ಶೇ.97ರಷ್ಟುಸುಂಕ ವಿನಾಯಿತಿ ನೀಡಬೇಕು ಎಂದು ಬಾಂಗ್ಲಾದೇಶ ಮಾಡಿದ ಕೋರಿಕೆಯನ್ನು ಚೀನಾ ಮನ್ನಿಸಿದ್ದು, ಬಾಂಗ್ಲಾದ 5,161 ಉತ್ಪನ್ನಗಳ ಶೇ.97ರಷ್ಟುತೆರಿಗೆಯನ್ನು ಮನ್ನಾ ಮಾಡಲು ಚೀನಾ ಸಮ್ಮತಿಸಿದೆ. ಜುಲೈ 1ರಿಂದ ಇದು ಜಾರಿಗೆ ಬರಲಿದೆ. ಗ್ಯಾಲ್ವನ್‌ ಕಣಿವೆಯಲ್ಲಿ 20 ಭಾರತೀಯ ಸೈನಿಕರನ್ನು ಕೊಂದ ಮರುದಿನವೇ ಚೀನಾದಿಂದ ಈ ನಿರ್ಧಾರ ಹೊರಬಿದ್ದಿದೆ.

ಏಷ್ಯಾ-ಪೆಸಿಫಿಕ್‌ ವ್ಯಾಪಾರ ಒಪ್ಪಂದ ಅನ್ವಯ ಈ ನಿರ್ಧಾರ ಮಾಡಲಾಗಿದೆ. ಈ ನಿರ್ಧಾರದಿಂದ ಚೀನಾ ಹಾಗೂ ಬಾಂಗ್ಲಾದೇಶದ ಸಂಬಂಧ ಇನ್ನಷ್ಟುಬಲಿಷ್ಠವಾಗಲಿದೆ ಎಂದು ಬಾಂಗ್ಲಾ ಅಭಿಪ್ರಯಿಸಿದೆ.

ಚೀನಾದ ಕುಮ್ಮಕ್ಕಿನಿಂದಲೇ ಗಡಿಯಲ್ಲಿ ಪಾಕಿಸ್ತಾನ ಕ್ಯಾತೆ ತೆಗೆಯುತ್ತಿದೆ. ಭಾರತದ ಕೆಲ ಭಾಗವನ್ನೂ ಸೇರಿಸಿ ತನ್ನದೆಂದು ಹೊಸ ನಕ್ಷೆ ಬಿಡುಗಡೆ ಮಾಡಿದ ನೇಪಾಳದ ನಡೆ ಹಿಂದೆಯೂ ಚೀನಾದ ಕೈವಾಡ ಇದೆ.