ಬೀಜಿಂಗ್‌(ಜೂ.01): ಜನಸಂಖ್ಯೆ ಹೆಚ್ಚಾಗಿ 1980ರ ದಶಕದಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದಿದ್ದ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಚೀನಾದಲ್ಲಿ ಇದೀಗ ಜನಸಂಖ್ಯೆ ಕೊರತೆ ಭೀತಿ ಎದುರಾಗಿದೆ. ಹೀಗಾಗಿ 5 ವರ್ಷಗಳ ಹಿಂದೆ ದೇಶದ ಬಹುತೇಕ ದಂಪತಿಗೆ 2 ಮಗು ಹೊಂದಲು ಅವಕಾಶ ಕಲ್ಪಿಸಿದ್ದ ಸರ್ಕಾರ, ಇದೀಗ ಆ ಮಿತಿಯನ್ನು ಮೂರಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಸೋಮವಾರ ಇಲ್ಲಿ ನಡೆದ ಪಕ್ಷದ ಪಾಲಿಟ್‌ ಬ್ಯೂರೋ ಸಭೆಯಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ.. ಜೊತೆಗೆ 3 ಮಕ್ಕಳನ್ನು ಹೆರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದೂ ಹೇಳಿದೆ.

ನಂ.1 ಚೀನಾಕ್ಕೆ ಇದೀಗ ಜನಸಂಖ್ಯೆ ಕುಸಿತ ಭೀತಿ!

ನೀತಿಗೆ ಕಾರಣ ಏನು?:

1980ರ ದಶಕದಲ್ಲಿ ಚೀನಾ ಜನಸಂಖ್ಯೆ 100 ಕೋಟಿ ಸಮೀಪಕ್ಕೆ ಬಂದಾಗ, ಸರ್ಕಾರ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದಿತ್ತು. ಪರಿಣಾಮ, ನಂತರದ ವರ್ಷಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿ ಯುವಸಮೂಹದ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಪ್ರಸ್ತಕ 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ 2022ರ ವೇಳೆಗೆ ತನ್ನ ಗರಿಷ್ಠ ಮಟ್ಟಮುಟ್ಟಿ, ಬಳಿಕ ಜನಸಂಖ್ಯೆಯಲ್ಲಿ ಇಳಿಕೆ ಕಾಣಲಿದೆ. ಇದು ಭವಿಷ್ಯದಲ್ಲಿ ಭಾರೀ ಸಮಸ್ಯೆಗೆ ಕಾರಣವಾಗಲಿದೆ ಎಂದು ಇತ್ತೀಚಿನ ವರದಿಯೊಂದು ಎಚ್ಚರಿಸಿತ್ತು. ದಶಕದ ಹಿಂದೆ ದುಡಿಯುವ ವರ್ಗ ಎಂದು ಗುರುತಿಸಲಾಗುವ 15-59ರ ವಯೋಮಿತಿ ಜನರ ಪ್ರಮಾಣವು ಒಟ್ಟು ಜನಸಂಖ್ಯೆಯಲ್ಲಿ ಶೇ.70ರಷ್ಟುಇದ್ದಿದ್ದು, ಕಳೆದ ವರ್ಷ ಶೇ.63ಕ್ಕೆ ಇಳಿದಿತ್ತು. ಇನ್ನು ಇದೇ ಅವಧಿಯಲ್ಲಿ 65 ವರ್ಷ ಮೇಲ್ಪಟ್ಟವರ ಪ್ರಮಾಣವು ಶೇ.8.9ರಿಂದ ಶೇ.13.5ಕ್ಕೆ ಹೆಚ್ಚಿತ್ತು.

ಹುಟ್ಟೋ ಮೂರನೇ ಮಗುವಿಗೆ ದಂಡ ಹಾಕಿ, ಜೈಲಿಗೆ ಕಳ್ಸಿ ಎಂದ ಕಂಗನಾ

ಈ ಹಿನ್ನೆಲೆಯಲ್ಲಿ 2016ರಲ್ಲಿ 2 ಮಗು ಹೊಂದಲು ಅವಕಾಶ ಕಲ್ಪಿಸಿದ್ದ ಸರ್ಕಾರ, ಅದನ್ನು 3ಕ್ಕೆ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ. ಅಲ್ಲದೆ ಉದ್ಯೋಗ ಕುಸಿತ, ಮಕ್ಕಳ ಪೋಷಣೆ ಹೊರಲಾರದೇ ಬಹುತೇಕ ಯುವಜೋಡಿಗಳು 1 ಮಗುವಿಗೆ ಸೀಮಿತವಾಗುತ್ತಿರುವ ಹಿನ್ನೆಲೆಯಲ್ಲಿ 2 ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೆರುವ ದಂಪತಿಗೆ ಆರ್ಥಿಕ ನೆರವನ್ನೂ ನೀಡಲು ಸರ್ಕಾರ ನಿರ್ಧರಿಸಿದೆ.

ಯಾವಾಗ ಯಾವ ನೀತಿ?

- 1980... 1 ಮಗು

- 2016... 2 ಮಕ್ಕಳು

- 2021...3 ಮಕ್ಕಳು

ಹೊಸ ನೀತಿಗೆ ಕಾರಣ ಏನು?

- 15-59 ವಯಸ್ಸಿನ ವ್ಯಕ್ತಿಗಳ ಸಂಖ್ಯೆ 10 ವರ್ಷದಲ್ಲಿ ಶೇ.70ರಿಂದ 63ಕ್ಕೆ ಇಳಿಕೆ

- 65 ವರ್ಷ ಮೇಲ್ಪಟ್ಟವರ ಜನಸಂಖ್ಯೆ 10 ವರ್ಷದಲ್ಲಿ ಶೇ.8.9ರಿಂದ ಶೇ.13.5ಕ್ಕೆ ಹೆಚ್ಚಳ

- ಯುವಕರ ಸಂಖ್ಯೆ ಕುಸಿಯುತ್ತಿದೆ ಎಂಬುದು ಇದರ ಅರ್ಥ

- ಹೀಗಾಗಿ 3 ಮಕ್ಕಳನ್ನು ಹೆರಲು ಇನ್ನು ಅವಕಾಶ