ಬೀಜಿಂಗ್‌(ಮೇ.30): ಭಾರತ-ಚೀನಾ ನಡುವಿನ ಗಡಿ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ‘ಆಫರ್‌’ ಅನ್ನು ಭಾರತದ ಬೆನ್ನಲ್ಲೇ ಚೀನಾ ಸರ್ಕಾರ ಕೂಡ ತಿರಸ್ಕರಿಸಿದೆ. ಭಾರತ ಹಾಗೂ ಚೀನಾಗೆ ಭಿನ್ನಾಭಪ್ರಾಯ ಬಗೆಹರಿಸಿಕೊಳ್ಳುವ ವಿಚಾರದಲ್ಲಿ ‘ಮೂರನೇ ವ್ಯಕ್ತಿ’ಗಳ ಮಧ್ಯಪ್ರವೇಶ ಬೇಕಿಲ್ಲ ಎಂದು ಚೀನಾ ಖಡಕ್ಕಾಗಿ ನುಡಿದಿದೆ.

ಬುಧವಾರ ಅಚ್ಚರಿಯ ಹೇಳಿಕೆ ನೀಡಿದ್ದ ಟ್ರಂಪ್‌, ‘ಭಾರತ ಮತ್ತು ಚೀನಾ ದೇಶಗಳ ಮಧ್ಯೆ ಶಾಂತಿ ಪುನಃ ಸ್ಥಾಪನೆಗಾಗಿ ಮಧ್ಯಸ್ಥಿಕೆ ವಹಿಸಲು ನಾನು ಸಿದ್ಧ. ಮಧ್ಯಸ್ಥಿಕೆ ವಹಿಸುವ ಬಗ್ಗೆ ಉಭಯ ರಾಷ್ಟ್ರಗಳಿಗೆ ತಿಳಿಸಿದ್ದೇನೆ’ ಎಂದಿದ್ದರು. ಗುರುವಾರ ಕೂಡ ಈ ಹೇಳಿಕೆ ಪುನರುಚ್ಚರಿಸಿದ್ದರು. ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ರಾಷ್ಟ್ರಗಳ ಮಧ್ಯೆ ತ್ವೇಷಮಯ ವಾತಾವರಣ ಉದ್ಭವವಾಗಿರುವ ನಡುವೆಯೇ ಟ್ರಂಪ್‌ ಈ ಹೇಳಿಕೆ ನೀಡಿದ್ದರು.

ಶುಕ್ರವಾರ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ವಕ್ತಾರ ಝಾವೋ ಲಿಜಿಯಾನ್‌, ‘ಎರಡೂ ದೇಶಗಳು ಮೂರನೇಯವರ ಮಧ್ಯಪ್ರವೇಶ ಬಯಸುವುದಿಲ್ಲ. ಭಾರತ ಹಾಗೂ ಚೀನಾ ನಡುವೆ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಸಂವಹನದ ಮಾರ್ಗವಿದೆ. ಮಾತುಕತೆಯ ಮೂಲಕ ವಿಷಯ ಬಗೆಹರಿಸಿಕೊಳ್ಳಲು ನಾವು ಶಕ್ತರಾಗಿದ್ದೇವೆ. ಭಾರತದ ವಿಚಾರದಲ್ಲಿ ಚೀನಾ ನಿಲುವು ಸ್ಪಷ್ಟವಾಗಿದೆ’ ಎಂದು ತಿರುಗೇಟು ನೀಡಿದರು.

ಇದಕ್ಕೂ ಮುನ್ನ ಬುಧವಾರವೇ ಪ್ರತಿಕ್ರಿಯೆ ನೀಡಿದ್ದ ಭಾರತದ ವಿದೇಶಾಂಗ ವಕ್ತಾರ ಅನುರಾಗ್‌ ಶ್ರೀವಾಸ್ತವ, ‘ಚೀನಾದೊಂದಿಗೆ ಶಾಂತಿಯುತವಾಗಿ ವಿಷಯ ಇತ್ಯರ್ಥಪಡಿಸಿಕೊಳ್ಳುವ ಯತ್ನದಲ್ಲಿದ್ದೇವೆ’ ಎಂದಿದ್ದರು.

ಈ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷಕ್ಕೆ ಮಂಗಳ ಹಾಡಲು ಮಧ್ಯಸ್ಥಿಕೆ ವಹಿಸುವುದಾಗಿಯೂ ಟ್ರಂಪ್‌ ಹೇಳಿದ್ದರು. ಆದರೆ ಮಧ್ಯಸ್ಥಿಕೆ ಆಹ್ವಾನವನ್ನು ಪಾಕ್‌ ಹಾಗೂ ಭಾರತ ತಿರಸ್ಕರಿಸಿದ್ದವು.