ನವದೆಹಲಿ(ಸೆ.22): ವಿಶ್ವಕ್ಕೆಲ್ಲಾ ಕೊರೋನಾ ಹಬ್ಬಿಸಿದ ಆರೋಪ ಹೊತ್ತಿರುವ ಚೀನಾ, ಇದೀಗ ತಾನು ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆ ವಿತರಣೆಯಲ್ಲೂ ಕುಟಿಲ ರಾಜತಾಂತ್ರಿಕತೆ ಮೆರೆಯಲು ಹೊರಟಿರುವ ವಿಷಯ ಬೆಳಕಿಗೆ ಬಂದಿದೆ.

ಅಮೆರಿಕ, ಬ್ರಿಟನ್‌, ಆಸ್ಪ್ರೇಲಿಯಾದಂಥ ಶ್ರೀಮಂತ ದೇಶಗಳು ಈಗಾಗಲೇ ಕೊರೋನಾ ಲಸಿಕೆ ಉತ್ಪಾದಿಸುವ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರೆ, ಚೀನಾ ತನ್ನ ಲಸಿಕೆಯನ್ನು ಆರ್ಥಿಕವಾಗಿ ಬಡ, ಮಧ್ಯಮ ಸ್ಥಿತಿಯಲ್ಲಿರುವ ಮತ್ತು ವ್ಯೂಹಾತ್ಮಕವಾಗಿ ಮಹತ್ವವಾಗಿರುವ ದೇಶಗಳಿಗೆ ವಿತರಿಸಲು ಮುಂದಾಗಿದೆ. ಉದಾಹರಣೆಗೆ ನೆರೆಹೊರೆಯ ಕಾಂಬೋಡಿಯಾ, ಮ್ಯಾನ್ಮಾರ್‌, ಥಾಯ್ಲೆಂಡ್‌, ವಿಯೆಟ್ನಾಂ, ಲ್ಯಾಟಿನ್‌ ಅಮೆರಿಕ, ಪಶ್ಚಿಮ ಏಷ್ಯಾ, ಉತ್ತರ ಆಫ್ರಿಕಾ, ಪಶ್ಚಿಮ ಯುರೋಪ್‌ನ ಕೆಲ ದೇಶಗಳನ್ನು ಚೀನಾ ಇದಕ್ಕಾಗಿ ಆರಿಸಿಕೊಂಡಿದೆ.

ಇನ್ನು ತನ್ನ ಮಹತ್ವಾಕಾಂಕ್ಷೆಯ ಬಿಆರ್‌ಐ (ಬೆಲ್ಟ್‌ ಆ್ಯಂಡ್‌ ರೋಡ್‌) ಯೋಜನೆಗೆ ಸಹಿ ಹಾಕಿದ ದೇಶಗಳಿಗೆ ಲಸಿಕೆ ವಿತರಣೆಯ ಆದ್ಯತೆಯ ಷರತ್ತನ್ನೂ ವಿಧಿಸಿದೆ ಎನ್ನಲಾಗಿದೆ.

ಇದರ ಜೊತೆಗೆ ಲಸಿ​ಕೆ ಪ್ರಯೋಗಕ್ಕೆ ಬಡ ಬಾಂಗ್ಲಾದೇಶದ 40000 ಜನರನ್ನು ಆಯ್ಕೆ ಮಾಡಿಕೊಂಡಿದೆ. ಜೊತೆಗೆ ತನ್ನ ದೇಶದಲ್ಲಿನ ಮುಸ್ಲಿಂ ಉಯಿಗುರ್‌ಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಿಕೊಂಡಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.