* ಭಾರತ ಗಡಿಯಲ್ಲಿ ಪತ್ತೇದಾರಿಕೆಗೆ ಕುತಂತ್ರ* ಹಿಂದಿ ತರ್ಜುಮೆದಾರರ ನೇಮಕಕ್ಕೆ ಚೀನಾ ಸೇನೆ ಸಿದ್ಧತೆ* ಗೂಢಚರ್ಯೆ ಕೆಲಸಕ್ಕೆ ಟಿಬೆಟ್‌ ಜನತೆ ಈಗಾಗಲೇ ನೇಮಕ

ಬೀಜಿಂಗ್‌(ಮೇ.05): ಭಾರತದ ವಿರುದ್ಧ ಗಡಿಯಲ್ಲಿ ಒಂದಿಲ್ಲೊಂದು ಕಿರಿಕಿರಿ ಸೃಷ್ಟಿಸುವ ಚೀನಾ, ಇದೀಗ ಹಿಂದಿ ತರ್ಜುಮೆದಾರರ ನೇಮಿಸಿಕೊಳ್ಳಲು ಮುಂದಾಗಿದೆ. ಭಾರತದ ಸೇನೆಯ ರಹಸ್ಯ ಮಾಹಿತಿಗಳನ್ನು ಪತ್ತೇದಾರಿಕೆ ಮಾಡಿ ತಿಳಿದುಕೊಳ್ಳುವ ಉದ್ದೇಶದಿಂದ ಈ ಕೆಲಸಕ್ಕೆ ಅದು ಮುಂದಾಗಿದೆ. ಇದಲ್ಲದೆ, ವಾಸ್ತವ ಗಡಿ ರೇಖೆಗೆ ಹೊಂದಿಕೊಂಡ ಟಿಬೆಟ್‌ನಲ್ಲಿನ ಸಾವಿರಾರು ನಿರುದ್ಯೋಗಿಗಳನ್ನು ಅದು ನೇಮಕ ಮಾಡಿಕೊಳ್ಳುತ್ತಿದ್ದು, ಗುಪ್ತಚರ ಕಾರ್ಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಭಾರತದ ಉತ್ತರಾಖಂಡ, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ಗಡಿಗಳು ಚೀನಾ ಆಕ್ರಮಿಸಿಕೊಂಡಿರುವ ಗಡಿಗೆ ಹೊಂದಿಕೊಂಡಿವೆ. ಟಿಬೆಟ್‌ನಲ್ಲಿನ ಹಲವು ಜನರು ಈಗಾಗಲೇ ಹಿಂದಿ ಬಲ್ಲವರಾಗಿದ್ದಾರೆ. ಇವರನ್ನು ಹಾಗೂ 3000 ಬಡ ಟಿಬೆಟಿ ನಿರುದ್ಯೋಗಿಗಳನ್ನು ಗಡಿಯಲ್ಲಿ ಪತ್ತೇದಾರಿಕೆ ಕೆಲಸಕ್ಕೆ ಚೀನಾ ನೇಮಿಸಿಕೊಂಡಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಇದಲ್ಲದೆ, ಟಿಬೆಟ್‌ ಜಿಲ್ಲಾ ಸೇನಾಪಡೆ ಸಿಬ್ಬಂದಿಯು ಚೀನಾದ ಹಲವು ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಿಗೆ 2 ತಿಂಗಳಿಂದ ಭೇಟಿ ನೀಡುತ್ತಿದ್ದಾರೆ. ‘ಚೀನಾ ಸೇನೆಗೆ ಹಿಂದಿ ತರ್ಜುಮೆದಾರರ ಬೇಕಾಗಿದ್ದಾರೆ. ಸಾಕಷ್ಟುಉದ್ಯೋಗಾವಕಾಶಗಳು ಲಭ್ಯವಿವೆ’ ಎಂದು ಉಪನ್ಯಾಸಗಳನ್ನು ನೀಡಿ ಬಂದಿದ್ದಾರೆ. ಪದವೀಧರರನ್ನು ಹಿಂದಿ ತರ್ಜುಮೆದಾರರ ನೇಮಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಭಾರತದ ಗುಪ್ತಚರರಿಗೆ ಲಭಿಸಿದೆ.

ಈ ಹಿಂದೆ ಭಾರತೀಯ ಸೇನೆಯು ಟಿಬೆಟ್‌ ಗಡಿಯಲ್ಲಿ ಪತ್ತೇದಾರಿಕೆ ಮಾಡಲು ಟಿಬೆಟ್‌ ಕಲಿಕೆಯಲ್ಲಿ ತರಬೇತಿ ಪಡೆದಿತ್ತು.

ಬೀಜಿಂಗ್‌ನಲ್ಲಿ ಸೆಮಿ ಲಾಕ್ಡೌನ್‌: ಶಾಲೆ, ಮೆಟ್ರೋ ಬಂದ್‌!

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಬುಧವಾರ 53 ಹೊಸ ಕೋವಿಡ್‌ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಬುಧವಾರ ಅರೆ ಲಾಕ್‌ಡೌನ್‌ ಘೋಷಿಸಲಾಗಿದೆ. ಶಾಲೆಗಳು, ಮೆಟ್ರೋ ನಿಲ್ದಾಣ, ರೆಸ್ಟೋರೆಂಟ್‌ಗಳು ಸೇರಿದಂತೆ ಎಲ್ಲ ಪ್ರಮುಖ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲಾಗಿದ್ದು, 2.1 ಕೋಟಿ ನಿವಾಸಿಗಳಿಗೆ ಪ್ರತಿ ದಿನ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಬೀಜಿಂಗ್‌ನಲ್ಲಿ ಒಮಿಕ್ರೋನ್‌ ಅಬ್ಬರ ಮುಂದುವರೆದಿದ್ದು, 500ಕ್ಕೂ ಹೆಚ್ಚು ಕೇಸುಗಳು ಈವರೆಗೆ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 40 ಸಬ್‌ವೇ ನಿಲ್ದಾಣ ಹಾಗೂ 158 ಬಸ್‌ ಮಾರ್ಗಗಳ ಮೇಲೆ ನಿರ್ಬಂಧ ಹೇರಲಾಗಿದೆ. ವಿಶೇಷವಾಗಿ ಚೀನಾ ಸರ್ಕಾರದ ಉನ್ನತ ಅಧಿಕಾರಿಗಳು ನೆಲೆಸಿದ ಚಾವೊಯಾಂಗ್‌ ಜಿಲ್ಲೆಯಲ್ಲಿ ಸೋಂಕು ಹರಡದಂತೇ ಕಟ್ಟುನಿಟ್ಟಿನ ಕ್ರಮ ಘೋಷಿಸಲಾಗಿದೆ. ಮೇ 11 ರವರೆಗೆ ಶಾಲೆಗಳನ್ನು ಮುಚ್ಚಲಾಗಿದೆ. ತುರ್ತು ಕಾರ್ಯಕ್ಕಾಗಿ ಬೀಜಿಂಗ್‌ ಬಿಟ್ಟು ತೆರಳಬೇಕಾದವರು 48 ಗಂಟೆ ಮುಂಚಿತವಾಗಿ ಕೋವಿಡ್‌ ಪರೀಕ್ಷೆಗೆ ಒಳಗಾದ ನೆಗೆಟಿವ್‌ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.