ಬಿಜಿಂಗ್(ನ.16): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

ಮೈತ್ರಿ ದಿನದ ಅಂಗವಾಗಿ ರಾಜನಾಥ್ ಸಿಂಗ್, ಚೀನಾ ಗಡಿ ಸಮೀಪದ ತವಾಂಗ್‌ಗೆ ಭೇಟಿ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ವಿವಾದಿತ ಪ್ರದೇಶದಲ್ಲಿ ಭಾರತದ ಚಟುವಟಿಕೆ ಖಂಡನಾರ್ಹ ಎಂದು ಕಿಡಿಕಾರಿದೆ. 

ನಿಜಕ್ಕೂ ವಿಶೇಷ: ಪ್ರವಾಸಿಗರಿಗೆ ಮುಕ್ತಗೊಂಡ ಸಿಯಾಚಿನ್ ನಿರ್ಗಲ್ಲು ಪ್ರದೇಶ!

ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ  ಭಾರತದ ನಡವಳಿಕೆಯನ್ನು ಒಪ್ಪಿಕೊಳ್ಳಲು ಚೀನಾ ತಯಾರಿಲ್ಲ ಎಂದು ಚೀನಾ ವಿದೇಶಾಂಗ ವಕ್ತಾರ ಗೆಂಗ್ ಶುವಾಂಗ್ ಅಸಮಾಧಾನ ಹೊರಹಾಕಿದ್ದಾರೆ. 

ಭಾರತದ ಈಶಾನ್ಯ ರಾಜ್ಯಗಳ ಭಾಗವಾದ ಅರುಣಾಚಲ ಪ್ರದೇಶ, ದಕ್ಷಿಣ ಭಾಗದ ಟಿಬೆಟ್‌ನ ಭಾಗವೂ ಹೌದು. ಈ ಸಂಬಂಧ ಉಂಟಾಗಿರುವ ಗಡಿ ವಿವಾದದ ಬಗ್ಗೆ ಈವರೆಗೆ ಉಭಯ ದೇಶಗಳ ನಡುವೆ 21 ಸುತ್ತು ಮಾತುಕತೆಗಳು ನಡೆದಿದೆ. 

ಎರಡೂ ದೇಶಗಳ ನಡುವೆ ಸುಮಾರು 3488 ಕಿಮೀ ಉದ್ದದ ಗಡಿ ಭಾಗ ವಿವಾದದಲ್ಲಿದ್ದು, ಪ್ರಧಾನಿಯೂ ಸೇರಿದಂತೆ ಭಾರತದ ಯಾವುದೇ ನಾಯಕ ಅಥವಾ ಅಧಿಕಾರಿಗಳು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗ ಚೀನಾ ಕ್ಯಾತೆ ತೆಗೆಯುವುದು ಸಾಮಾನ್ಯ.