ಗಲ್ವಾನ್‌ ನಮ್ಮದು, ಜಗಳ ತೆಗೆದಿದ್ದೇ ಭಾರತ: ಚೀನಾ| ಚೀನಿಯರ ಮೇಲೆ ಭಾರತೀಯರಿಂದಲೇ ದಾಳಿ| ಚೀನಾದಿಂದ ಬಿಕ್ಕಟ್ಟಿನ ವಿವರಣೆ

ನವದೆಹಲಿ(ಜೂ.21): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆ ಬಳಿಕ ಚೀನಾಗೆ ಎಚ್ಚರಿಕೆ ನೀಡುತ್ತಿದ್ದಂತೆಯೇ, ಚೀನಾ ಸರ್ಕಾರವು ಗಲ್ವಾನ್‌ ಕಣಿವೆ ತನ್ನ ಪ್ರದೇಶದಲ್ಲಿದೆ ಹೇಳಿಕೊಂಡು ಮತ್ತೆ ವಿವಾದ ಸೃಷ್ಟಿಸಿದೆ.

ಈ ಸಂಬಂಧ ಚೀನಾ ವಿದೇಶಾಂಗ ವಕ್ತಾರ ಝಾವೋ ಲಿಜಿಯಾನ್‌ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಲ್ಲದೆ, ಟ್ವೀಟ್‌ ಕೂಡ ಮಾಡಿದ್ದಾರೆ. ಗಲ್ವಾನ್‌ ಕಣಿವೆ ಭಾರತ-ಚೀನಾ ವಾಸ್ತವ ಗಡಿ ರೇಖೆಯ ಚೀನಾ ಭಾಗದಲ್ಲಿದೆ. ಅನೇಕ ವರ್ಷಗಳಿಂದ ಚೀನಾ ಪಡೆಗಳು ಇಲ್ಲಿ ಗಸ್ತು ನಡೆಸುತ್ತಿವೆ. ಏಪ್ರಿಲ್‌ನಿಂದ ಭಾರತದ ಪಡೆಗಳು ಏಕಪಕ್ಷೀಯವಾಗಿ ಹಾಗೂ ನಿರಂತರವಾಗಿ ರಸ್ತೆ, ಸೇತುವೆ ನಿರ್ಮಿಸುತ್ತಿವೆ ಮತ್ತು ಇತರ ಕಾಮಗಾರಿ ನಡೆಸುತ್ತಿವೆ. ಚೀನಾ ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ ಸಲ್ಲಿಸಿದೆ ಎಂದಿದ್ದಾರೆ.

ಮೇ 6ರಂದು ಭಾರತದ ಪಡೆಗಳು ಗಡಿ ದಾಟಿ ಚೀನಾ ನೆಲಕ್ಕೆ ಅಕ್ರಮವಾಗಿ ನುಗ್ಗಿದವು. ಬ್ಯಾರಿಕೇಡ್‌ ಹಾಕಿದವು. ಇದರಿಂದ ಚೀನಾ ಪಡೆಗಳಿಗೆ ಅಡ್ಡಿ ಆಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಉಭಯ ಪಡೆಗಳು ಹಾಗೂ ರಾಜತಾಂತ್ರಿಕರು ಮಾತುಕತೆ ನಡೆಸಬೇಕಾಯಿತು. ಚೀನಾದ ತೀವ್ರ ಪ್ರತಿಭಟನೆ ನಂತರ ಭಾರತವು ಗಡಿ ದಾಟಿ ಬಂದ ತನ್ನ ಸೈನಿಕರನ್ನು ಹಿಂಪಡೆಯಿತು ಹಾಗೂ ಅಲ್ಲಿ ನಿರ್ಮಿಸಿದ್ದ ಘಟಕಗಳನ್ನು ತೆರವುಗೊಳಿಸಿತು.

ಜೂ.6ರಂದು ನಡೆದ ಕಮಾಂಡರ್‌ ಮಟ್ಟದ ಮಾತುಕತೆಯಲ್ಲಿ ಉಭಯ ಪಡೆಗಳನ್ನು ಹಂತ ಹಂತವಾಗಿ ಹಿಂಪಡೆಯಲು ಚರ್ಚೆಗೆ ತೀರ್ಮಾನಿಸಿದವು. ಆದರೆ ಆಘಾತಕಾರಿ ಎಂಬಂತೆ ಜೂನ್‌ 15ರಂದು ಈ ಶಾಂತಿ ಸಹಮತ ಉಲ್ಲಂಘಿಸಿದ ಭಾರತದ ಪಡೆಗಳು ಮತ್ತೆ ಗಡಿರೇಖೆ ದಾಟಿ ಉದ್ದೇಶಪೂರ್ವಕವಾಗಿ ಪ್ರಚೋದಿಸತೊಡಗಿದವು. ಸಂಧಾನ ಮಾತುಕತೆಗೆ ತೆರಳಿದ ಚೀನಾ ಅಧಿಕಾರಿಗಳು ಹಾಗೂ ಸೈನಿಕರ ಮೇಲೆ ಭಾರತದ ಮುಂಚೂಣಿ ಸೈನಿಕರು ದಾಳಿ ನಡೆಸಿದರು ಎಂದಿದ್ದಾರೆ.