* ಚೀನಾದ ಟಿಯಾನ್ವೆನ್‌ -1 ನೌಕೆ ಹೊತ್ತೊಯ್ದಿದ್ದ ಝುರಾಂಗ್‌ ರೋವರ್* ಮಂಗಳ ಗ್ರಹದ ಮೇಲಿಳಿದ ಚೀನಾ ನೌಕೆ* ಈ ಸಾಧನೆ ಮಾಡಿದ ವಿಶ್ವದ 2ನೇ ದೇಶ ಚೀನಾ

ಬೀಜಿಂಗ್‌(ಮೇ.16): ಚೀನಾದ ಟಿಯಾನ್ವೆನ್‌ -1 ನೌಕೆ ಹೊತ್ತೊಯ್ದಿದ್ದ ಝುರಾಂಗ್‌ ರೋವರ್‌ ಶನಿವಾರ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿದಿದೆ. ಈ ಮೂಲಕ ಅಮೆರಿಕದ ಬಳಿಕ ಈ ಸಾಧನೆ ಮಾಡಿದ ಎರಡನೇ ದೇಶ ಎನಿಸಿಕೊಂಡಿದೆ. ಅಮೆರಿಕ ಮತ್ತು ರಷ್ಯಾ ಜೊತೆ ಬಾಹ್ಯಾಕಾಶ ಸ್ಪರ್ಧೆ ನಡೆಸುತ್ತಿರುವ ಚೀನಾಕ್ಕೆ ಈ ಯಶಸ್ಸು ಅತ್ಯಂತ ಮಹತ್ವದ್ದಾಗಿದೆ.

ಮಂಗಳನ ಮೇಲೆ ಯುಟೋಪಿಯಾ ಪ್ಲಾನಿಟಿಯಾ ಎಂಬ ಪೂರ್ವ ನಿರ್ಧರಿತ ಜಾಗದಲ್ಲೇ ರೋವರ್‌ ಯಶಸ್ವಿಯಾಗಿ ಭೂಸ್ಪರ್ಶ ಮಾಡಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. 240 ಕೆಜಿ ತೂಕವಿರುವ ರೋವರ್‌, ತನ್ನೊಳಗೆ ಒಟ್ಟು 6 ಉಪಕರಣಗಳನ್ನು ಹೊಂದಿದ್ದು, ಅದನ್ನು ಬಳಸಿ ವಿವಿಧ ಸಂಶೋಧನೆ ನಡೆಸಲಿದೆ.

ಆರ್ಬಿಟರ್‌, ಲ್ಯಾಂಡರ್‌ ಮತ್ತು ರೋವರ್‌ ಒಳಗೊಂಡ ಟಿಯಾನ್ವೆನ್‌-1 ನೌಕೆಯನ್ನು ಚೀನಾ, 2020ರ ಜು.23ರಂದು ಹಾರಿಬಿಟ್ಟಿತ್ತು. ಇದು ಸೌರಮಂಡಲದಲ್ಲಿ ಚೀನಾದ ಮೊದಲ ಸಂಶೋಧನಾ ಯಾತ್ರೆಯಾಗಿತ್ತು. ಹೀಗಾಗಿ ಈ ಯೋಜನೆ ಕುರಿತು ಭಾರೀ ಕುತೂಹಲವೂ ಇತ್ತು.

ನೌಕೆಯು, ಕಳೆದ ಫೆಬ್ರುವರಿಯಲ್ಲೇ ಲ್ಯಾಂಡರ್‌ ಮತ್ತು ರೋವರ್‌ ಅನ್ನು ಮಂಗಳನ ಕಕ್ಷೆಗೆ ಸೇರಿತ್ತು. ಅಲ್ಲಿ ಸುಮಾರು 3 ತಿಂಗಳು ಸುತ್ತಿದ ಬಳಿಕ ಇದೀಗ ಲ್ಯಾಂಡರ್‌ ಮತ್ತು ರೋವರ್‌ ಮಂಗಳನ ನೆಲವನ್ನು ಸ್ಪರ್ಶಿಸಿದೆ.

ಮಂಗಳನ ಅಧ್ಯಯನಕ್ಕೆಂದು ವಿಶ್ವದ ವಿವಿಧ ದೇಶಗಳು ಇದುವರೆಗೆ 40 ಯೋಜನೆ ಜಾರಿಗೊಳಿಸಿವೆ. ಈ ಪೈಕಿ ಯಶಸ್ಸು ಕಂಡಿದ್ದು ಅರ್ಧದಷ್ಟು. ಅದರಲ್ಲೂ ಮಂಗಳನ ನೆಲವನ್ನು ಯಶಸ್ವಿಯಾಗಿ ಸ್ಪರ್ಶಿಸಿದ್ದು ಕೇವಲ ಅಮರಿಕ ಮತ್ತು ಚೀನಾ ಮಾತ್ರ.