ಕಠ್ಮಂಡು(ಸೆ.21): ಚೀನಾದ ಕುಮ್ಮಕ್ಕಿನೊಂದಿಗೆ ಭಾರತದ ಭೂಭಾಗವನ್ನು ಒಳಗೊಂಡ ನಕಾಶೆಯನ್ನು ಬಿಡುಗಡೆ ಮಾಡಿದ್ದ ನೇಪಾಳಕ್ಕೆ ಇದೀಗ ಚೀನಾವೇ ಕಂಟಕವಾಗಿ ಪರಿಣಮಿಸಿದೆ. ಹುಮ್ಲಾ ಜಿಲ್ಲೆಯ ಲಪ್ಚಾ- ಲಿಮಿ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡು ಅಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿದೆ.

ಅಲ್ಲದೇ ಈ ಪ್ರದೇಶಕ್ಕೆ ನೇಪಾಳದ ಜನರು ಭೇಟಿ ನೀಡುವುದಕ್ಕೆ ಚೀನಾ ತಡೆಯೊಡ್ಡಿದೆ ಎಂದು ನೇಪಾಳದ ಖಬರ್‌ಹಬ್‌ ಎಂಬ ವೆಬ್‌ಸೈಟ್‌ ವರದಿಯೊಂದನ್ನು ಪ್ರಕಟಿಸಿದೆ.

ಡೆಹ್ರಾ​ಡೂನ್‌, ನೈನಿ​ತಾಲೂ ನಮ್ಮದು: ನೇಪಾಳ ಹೊಸ ಕ್ಯಾತೆ!

ಲಪ್ಚಾ- ಲಿಮಿ ಪ್ರದೇಶಕ್ಕೆ ಗ್ರಾಮದ ಮುಖ್ಯಸ್ಥರೊಬ್ಬರು ಭೇಟಿ ನೀಡಿದ್ದ ವೇಳೆ ಅಲ್ಲಿ ಚೀನಾದ ಸೇನೆ ಕಟ್ಟಡಗಳನ್ನು ನಿರ್ಮಿಸುತ್ತಿರುವ ಸಂಗತಿ ತಿಳಿದು ದೂರು ನೀಡಿದ್ದರು. ಬಳಿಕ ಹುಮ್ಲಾ ಜಿಲ್ಲೆಯ ಸಹಾಯಕ ಜಿಲ್ಲಾ ಅಧಿಕಾರಿ ದಲ್‌ ಬಹಾದುರ್‌ ಹಮಲ್‌ ತನಿಖೆ ನಡೆಸಿದ ವೇಳೆ ನೇಪಾಳದ ಭೂ ಭಾಗವನ್ನು ಚೀನಾ ಅತಿಕ್ರಮಿಸಿದ್ದು ಕಂಡುಬಂದಿದೆ.

ಈ ವಿಷಯವನ್ನು ಇದೀಗ ನೇಪಾಳದ ಗೃಹ ಮತ್ತು ವಿದೇಶಾಂಗ ಇಲಾಖೆಯ ಗಮನಕ್ಕೂ ತರಲಾಗಿದೆ ಎಂದು ವರದಿಗಳು ತಿಳಿಸಿವೆ.