Asianet Suvarna News Asianet Suvarna News

ಕೋವಿಡ್‌ ಬಳಿ​ಕ ಚೀನಾ​ಗೆ ಆರ್ಥಿಕ ಮುಗ್ಗ​ಟ್ಟು, 300ಕ್ಕೂ ಹೆಚ್ಚು ಬ್ಯಾಂಕ್‌​ಗಳು ದಿವಾಳಿ ಭೀತಿ!

- ಕೋವಿಡ್‌ ಬಳಿ​ಕ ಚೀನಾ​ಗೆ ಆರ್ಥಿಕ ಮುಗ್ಗ​ಟ್ಟು!

- ಸಾಲದಲ್ಲಿ ಕಟ್ಟಿದ ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆ ಕಂಗಾಲು

- ರಿಯಲ್‌ ಎಸ್ಟೇಟ್‌, ವಿದ್ಯುತ್‌, ಉತ್ಪಾದನೆ, ವಿದೇಶಿ ಸಾಲ ಹೆಚ್ಚಳ

 

china economy under Pressure as energy Crisis hls
Author
Bengaluru, First Published Oct 10, 2021, 5:34 PM IST

ನವದೆಹಲಿ (ಅ. 10): ಜನಸಂಖ್ಯೆಯಲ್ಲಿ ವಿಶ್ವದ ನಂ.1 ಹಾಗೂ ಆರ್ಥಿಕತೆಯಲ್ಲಿ ವಿಶ್ವದ ನಂ.2 ದೇಶವಾಗಿರುವ ಚೀನಾ ಇದೀಗ ಸಮಸ್ಯೆಯ ಮಡುವಿನಲ್ಲಿದೆ. ದೇಶದಲ್ಲಿನ ರಿಯಲ್‌ ಎಸ್ಟೇಟ್‌ ವಲಯದ ಪತನ, ಇಂಧನ ಸಮಸ್ಯೆ, ಉತ್ಪಾದನಾ ವಲಯ ಕುಂಠಿತವಾಗಿರುವುದು, ವಿದೇಶಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ನೀಡಿದ ಬಾಹ್ಯ ಸಾಲದ ಪ್ರಮಾಣ ಮಿತಿ ಮೀರಿರುವುದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಅವರ ಜೀವನದ ಅತಿದೊಡ್ಡ ಸವಾಲು ತಂದೊಡ್ಡಿದೆ. ಅಮೆರಿಕವನ್ನು ಹಿಂದಿಕ್ಕುವ, ವಿಶ್ವದ ದೊಡ್ಡಣ್ಣನಾಗುವ ಆಶಯದಲ್ಲಿ ಕಟ್ಟಿದ ಸಾಲದ ಆರ್ಥಿಕತೆಯ ಅರಮನೆ ಇದೀಗ ಕುಸಿಯುವ ಅಪಾಯದಲ್ಲಿದೆ. ಈ ಹಿನ್ನೆಲೆಯಲ್ಲಿ ಚೀನಾ ಎದುರಿಸುತ್ತಿರುವ ಸಂಕಷ್ಟದ ಒಂದು ನೋಟ ಇಲ್ಲಿದೆ.

ರಿಯಲ್‌ ಎಸ್ಟೇಟ್‌ ಬಬಲ್‌ ಪತನ

ರಿಯಲ್‌ ಎಸ್ಟೇಟ್‌ ಉದ್ಯಮ ಚೀನಾದ ಆರ್ಥಿಕತೆ ಪ್ರಮುಖ ಬೆನ್ನಲುಬು. ದೇಶದ ಒಟ್ಟು ಜಿಡಿಪಿಯಲ್ಲಿ ರಿಯಲ್‌ ಎಸ್ಟೇಟ್‌ ಪಾಲು ಶೇ.25ಕ್ಕಿಂತ ಹೆಚ್ಚಿದೆ. ಆದರೆ ಪ್ರಸಕ್ತ ಕೊರೋನಾ ಬಿಕ್ಕಟ್ಟು ಹಾಗೂ ಇನ್ನಿತರೆ ಕಾರಣಗಳಿಂದಾಗಿ ದೇಶದಲ್ಲಿ 5 ಕೋಟಿಗೂ ಹೆಚ್ಚು ಮನೆಗಳು ಖಾಲಿ ಉಳಿದಿವೆ. ಮಾರಾಟವಾಗುವ ನಿರೀಕ್ಷೆಯಲ್ಲಿ ಜನ ಸಾಮಾನ್ಯರಿಗೆ, ಹಣಕಾಸು ಸಂಸ್ಥೆಗಳಿಗೆ ಬಾಂಡ್‌ ವಿತರಿಸಿ ಪಡೆದು ನಿರ್ಮಿಸಿದ್ದ ಈ ಆಸ್ತಿಗಳು ಮಾರಾಟವಾಗದೇ ಉಳಿದ ಕಾರಣ ಎವರ್‌ಗ್ರಾಂಡೆ ಸೇರಿದಂತೆ ಕನಿಷ್ಠ 10 ಬೃಹತ್‌ ರಿಯಲ್‌ ಎಸ್ಟೇಟ್‌ ಕಂಪನಿಗಳು ದಿವಾಳಿ ಅಂಚಿಗೆ ತಲುಪಿವೆ.

ಚೀನಾ ಆರ್ಥಿಕತೆ ಗಡಗಡ: ವಿಶ್ವಕ್ಕೇ ಆತಂಕ: ಕೋಟ್ಯಂತರ ಹೂಡಿಕೆದಾರರಿಗೆ ಆತಂಕ

ಇದಲ್ಲದೆ ಸಣ್ಣಪುಟ್ಟಕಂಪನಿಗಳು ಹೊಂದಿರುವ ಸಾಲವನ್ನೂ ಸೇರಿಸಿದರೆ ದೇಶದ ರಿಯಲ್‌ ಎಸ್ಟೇಟ್‌ ವಲಯದ ಸಾಲ 350 ಲಕ್ಷ ಕೋಟಿ ರು. ಎನ್ನಲಾಗಿದೆ. ಈ ಕಂಪನಿಗಳು ಮುಚ್ಚಿದರೆ, ಅವುಗಳನ್ನು ನಂಬಿ ಬಾಂಡ್‌ ಪಡೆದು ಹಣ ಕೊಟ್ಟಿದ್ದ ಕೋಟ್ಯಂತರ ಜನಸಾಮಾನ್ಯರು, ಕನಿಷ್ಠ 300 ಹಣಕಾಸು ಸಂಸ್ಥೆಗಳು ಕೂಡಾ ಇದೀಗ ದಿವಾಳಿಯ ಭೀತಿ ಎದುರಿಸುತ್ತಿವೆ. ಇನ್ನೊಂದೆಡೆ ರಿಯಲ್‌ ಎಸ್ಟೇಟ್‌ ಕಂಪನಿಗಳ ಮೇಲಿನ ಸಾಲಕ್ಕೆ ಮಿತಿ ಹೇರಿದ ಕಾರಣ, ಅವು ಹೊಸ ಸಾಲ ಪಡೆಯಲಾಗದೇ ಯೋಜನೆ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಮುಂಗಣ ಹಣ ಪಾವತಿ ಮಾಡಿದವರಿಗೆ ಮನೆಗಳೂ ಸಿಗುತ್ತಿಲ್ಲ.

ಕಲ್ಲಿ​ದ್ದ​ಲು ಸಮಸ್ಯೆ

ಕಲ್ಲಿದ್ದಲು ಸಮಸ್ಯೆ ಎದುರಾಗಿರುವ ಕಾರಣ ದೇಶದಲ್ಲಿ ವಿದ್ಯುತ್‌ ಸಮಸ್ಯೆ ತಲೆದೋರಿದೆ. ಒಂದೆಡೆ ಇಂಧನಕ್ಕೆ ಬೇಡಿಕೆ ಹೆಚ್ಚಾಗಿದ್ದರೆ ಮತ್ತೊಂದೆಡೆ ಪೂರೈಕೆ ಭಾರೀ ಪ್ರಮಾಣದಲ್ಲಿ ಇಳಿದಿದೆ. ಹೀಗಾಗಿ ವಿದ್ಯುತ್‌ ಬಳಕೆ ಮೇಲೆ ನಿಯಂತ್ರಣ ಹೇರಲಾಗಿದೆ. ಚೀನಾ ಆರ್ಥಿಕತೆಯ ಶೇ.60ರಷ್ಟುಉದ್ಯಮಗಳಿಗೆ ಕಲ್ಲಿದ್ದಲು ಇಂಧನ ಮೂಲ. ಇದೀಗ ಅದರ ದರ ದುಬಾರಿಯಾಗಿರುವುದು ಮತ್ತು ಇಂಧನ ಪೂರೈಕೆ ಕಡಿತ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ.

ಉತ್ಪಾದನಾ ವಲಯದ ಕುಸಿತ

ಇಂಧನ ಕಡಿತವು ಉತ್ಪಾದನಾ ವಲಯವನ್ನು ಗಂಭೀರವಾಗಿ ಕಾಡಿದೆ. ಕಲ್ಲಿದ್ದಲು ಪೂರೈಕೆ ಇಳಿಕೆ, ಕಠಿಣ ಪರಿಸರ ನಿಯಮಗಳು ಮತ್ತು ಬೇಡಿಕೆ ಹೆಚ್ಚಾದ ಪರಿಣಾಮ ಕಲ್ಲಿದ್ದಲು ಬೆಲೆ ದಾಖಲೆ ಪ್ರಮಾಣಕ್ಕೆ ಏರಿದೆ. ಕ್ರಿಸ್‌ಮಸ್‌ ವೇಳೆಗೆ ಪೂರೈಸಬೇಕಾದ ಉತ್ಪನ್ನಗಳ ಉತ್ಪಾದನೆ ಸಂದರ್ಭದಲ್ಲೇ ಎದುರಾದ ಈ ಬಿಕ್ಕಟ್ಟು ಭಾರೀ ಸಮಸ್ಯೆಗೆ ಕಾರಣವಾಗಿದೆ ಎಂದು ಉದ್ಯಮಗಳು ಗೋಳು ತೋಡಿಕೊಳ್ಳುತ್ತಿವೆ. ಉತ್ಪಾದನಾ ವಲಯ ಮತ್ತು ಆಸ್ತಿಯ ಮೇಲಿನ ಹೂಡಿಕೆಗಳೇ ಚೀನಾದ ಆರ್ಥಿಕ ಪ್ರಗತಿಯ ಪ್ರಮುಖ ಭಾಗವಾಗಿದ್ದು, ಈ ಎರಡೂ ವಲಯಗಳು ಇದೀಗ ಸಂಕಷ್ಟಕ್ಕೆ ಸಿಕ್ಕಿವೆ.

ಆರ್ಥಿಕ ಪ್ರಗತಿ ನಿರೀಕ್ಷೆ ಇಳಿಕೆ

ಇಂಧನ ಸಮಸ್ಯೆಯು ಆರ್ಥಿಕತೆಗೆ ಭಾರೀ ಶಾಕ್‌ ನೀಡಿದೆ. ಜಾಗತಿಕ ಹಣಕಾಸು ರೇಟಿಂಗ್‌ ಸಂಸ್ಥೆಯಾದ ಗೋಲ್ಡ್‌ಮನ್‌ ಸ್ಯಾಚ್‌್ಸ ಚೀನಾದ ಆರ್ಥಿಕ ಪ್ರಗತಿ ದರವನ್ನು ಈ ಹಿಂದಿನ ಶೇ.8.2ಕ್ಕೆ ಬದಲಾಗಿ ಶೇ.7.8ಕ್ಕೆ ಇಳಿಸಿದೆ. ಇಂಧನ ಸಮಸ್ಯೆ ದೇಶದ ಶೇ.44ರಷ್ಟುಉದ್ಯಮಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಗೋಲ್ಡ್‌ಮನ್‌ ವರದಿ ಹೇಳಿದೆ.

ಅಂತಾರಾಷ್ಟ್ರೀಯ ಸಾಲ ಹೆಚ್ಚಳ

ವಿದೇಶಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಲು ಚೀನಾ ಸರ್ಕಾರ ನೆರವಿನ ಬದಲಾಗಿ ಸಾಲವನ್ನು ದಾಳವಾಗಿ ಬಳಸಿಕೊಂಡಿದೆ. 2013ರ ಬಳಿಕ ಚೀನಾ ಸರ್ಕಾರ 165 ದೇಶಗಳ 13000 ಯೋಜನೆಗಳಿಗೆ ಸಾಲ ನೀಡಿದೆ. ಇಂಥ ಸಾಲದ ಮೊತ್ತ 63 ಲಕ್ಷ ಕೋಟಿ ರು. ದಾಟಿದೆ. ಚೀನಾದ ಇಂಥ ಸಾಲದ ಬಲೆಗೆ ಹಲವಾರು ದೇಶಗಳು ಸಿಕ್ಕಿಹಾಕಿಕೊಂಡು ಹೊರಬರಲಾರದೇ ಒದ್ದಾಡುತ್ತಿವೆ. ಒಂದು ಅಂದಾಜಿನ ಪ್ರಕಾರ ಕಡಿಮೆ ಮತ್ತು ಮಧ್ಯಮ ಆದಾಯ ಕನಿಷ್ಠ 40 ದೇಶಗಳು ತಮ್ಮ ದೇಶದ ಯೋಜನೆಗಳಿಗಾಗಿ ಪಡೆದಿರುವ ಸಾಲದ ಮೊತ್ತವು ಆಯಾ ದೇಶಗಳ ಜಿಡಿಪಿಯ ಶೇ.10ರ ಗಡಿ ದಾಟಿದೆ. ಇಂಥ ಸಾಲ ಸೂಕ್ತ ಕಾಲಕ್ಕೆ ಮರುಪಾವತಿಯಾಗದೇ ಇರುವುದು ಚೀನಾದ ಸಮಸ್ಯೆಯನ್ನು ಹೆಚ್ಚಿಸಿದೆ.

ಮುಚ್ಚಿಹಾಕಲು ಯತ್ನ

ಎವರ್‌ಗ್ರಾಂಡೆ ದಿವಾಳಿ ಸುದ್ದಿ ಬೆನ್ನಲ್ಲೇ ಬಾಂಡ್‌ ಖರೀದಿಸಿದ ಸಾವಿರಾರು ಜನರು, ಗುತ್ತಿಗೆದಾರರು, ಸಾಲ ನೀಡಿದ ಹಣಕಾಸು ಕಂಪನಿಗಳು ಕಂಪನಿಯ ಎದುರು ಸಾಲುಗಟ್ಟಿಹಣಕ್ಕಾಗಿ ಮೊರೆ ಇಟ್ಟಿವೆ. ಆದರೆ ಮತ್ತೊಂದೆಡೆ ಚೀನಾ ಸರ್ಕಾರ ಈ ಪ್ರತಿಭಟನೆ, ಆಕ್ರೋಶವನ್ನು ಮುಚ್ಚಿಹಾಕುವ ಯತ್ನ ನಡೆಸುತ್ತಿದೆ. ಎಲ್ಲೂ ದಂಗೆ, ಪ್ರತಿ​ಭ​ಟನೆ ನಡೆ​ಯ​ದಂತೆ ನಿಗಾ ವಹಿ​ಸಿ​ದೆ. ದೇಶದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೂಡಿಕೆದಾರರಲ್ಲಿ ಬಿಂಬಿಸಲು ಕಳೆದ ವಾರ ಚೀನಾದ ಕೇಂದ್ರೀಯ ಬ್ಯಾಂಕ್‌ ಮಾರುಕಟ್ಟೆಯಲ್ಲಿ 5 ಲಕ್ಷ ಕೋಟಿ ರು. ಹೂಡಿಕೆ ಮಾಡಿದೆ.

‘ಘೋಸ್ಟ್‌ ಸಿಟಿ​’ ಸಂಖ್ಯೆ ಏರಿ​ಕೆ!

ಚೀನಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಘೋಸ್ಟ್‌ ಸಿಟಿ (ದೂರದೂರದ ಪ್ರದೇಶದಲ್ಲಿ ನೂರಾರು ಖಾಲಿ ಅಪಾಟ್‌ಮೆಂಟ್‌ಗಳು ಖಾಲಿಯಾಗದೇ ಉಳಿದಿರುವುದು) ಪ್ರಮಾಣ ಹೆಚ್ಚುತ್ತಿದೆ. ಹೀಗೆ ಘೋಸ್ಟ್‌ ಸಿಟಿಗಳಲ್ಲಿ ಖಾಲಿ ಉಳಿದಿರುವ ಮನೆಗಳಲ್ಲಿ ಕನಿಷ್ಠ 9 ಕೋಟಿ ಜನರು ವಾಸಿಸಬಹುದು. ಅಂದರೆ ಜಿ7 ದೇಶಗಳ ಪೈಕಿ ಫ್ರಾನ್ಸ್‌, ಜರ್ಮನಿ, ಕೆನಡಾ, ಬ್ರಿಟನ್‌, ಇಟಲಿ ದೇಶದ ಅಷ್ಟೂಜನರನ್ನು ತಂದು ಈ ಮನೆಗಳಲ್ಲಿ ಇಡಬಹುದು. ಇತ್ತೀ​ಚೆಗೆ ಮಾರಾ​ಟ​ವಾ​ಗದೇ ಹೈರೈಸ್‌ ಕಟ್ಡ​ಡ​ಗ​ಳನ್ನು ಧ್ವಂಸ ಮಾಡಿ​ತ್ತು.

 

Follow Us:
Download App:
  • android
  • ios