ಬೀಜಿಂಗ್[ಮಾ.07]: ಚೀನಾದಲ್ಲೊಬ್ಬ ವ್ಯಕ್ತಿ ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ 10 ನಿಮಿಷದಲ್ಲೇ ತನ್ನ ಕಾರನ್ನು ನೇರವಾಗಿ ನದಿಗಿಳಿಸಿದ್ದಾನೆ. ಈ ಚಾಲಕನನ್ನು ಝಾಂಗ್ ಎಂದು ಗುರುತಿಸಲಾಗಿದೆ. ಇಲ್ಲಿನ ಸೆಕ್ಯೂರಿಟಿ ಕ್ಯಾಮೆರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದ್ದು, ಸದ್ಯ ಇದು ವೈರಲ್ ಆಗುತ್ತಿದೆ. 

ತಡೆಗೋಡೆ ಇಲ್ಲದ ಸೇತುವೆ ಮೇಲೆ ಕಾರು ಚಲಿಸುತ್ತಿದ್ದು, ಘಟನೆ ನಡೆದ ಸಂದರ್ಭದಲ್ಲಿ ಚಾಲಕ ಶುಭಾಶಯ ಕೋರುವ ಮೆಸೇಜ್ ಗೆ ರಿಪ್ಲೈ ಕಳುಹಿಸಲು ಟೈಪ್ ಮಾಡುತ್ತಿದ್ದ ಎನ್ನಲಾಗಿದೆ. 

ಡೈಲಿ ಮೇಲ್ ವರದಿಯನ್ವಯ ಈ ಘಟನೆ 21 ಫೆಬ್ರವರಿ 21 ರಂದು ಚೀನಾದ ಜೂನಿ ಎಂಬ ನಗರದಲ್ಲಿ ನಡೆದಿದೆ. ಜೂನಿಯ ಟ್ರಾಫಿಕ್ ಪೊಲೀಸ್ ಚೀನಾದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂ ವೀಬೋನಲ್ಲಿ ಘಟನೆಯ ಫೋಟೋಗಳನ್ನು ಶೇರ್ ಮಾಡುತ್ತಾ 'ಕಾರು ಚಾಲಕ ದುರ್ಘಟನೆ ನಡೆಯುವ ಕೇವಲ 10 ನಿಮಿಷ ಮೊದಲು ಲೈಸೆನ್ಸ್ ಪಡೆದುಕೊಂಡಿದ್ದ' ಎಂದು ಬರೆದಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಯೂಟ್ಯೂಬ್ ನಲ್ಲಿ ಮಿಸ್ಟರ್ ಹೀರೋ ಹೆಸರಿನ ಬಳಕೆದಾರ ಕೂಡಾ ಶೇರ್ ಮಾಡಿಕೊಂಡಿದ್ದಾರೆ.

ಫಾಕ್ಸ್ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ಝಾಂಗ್ 'ನಾನು ಕಾರು ಚಲಾಯಿಸುತ್ತಿದ್ದಾಗ, ಅಚಾನಕ್ಕಾಗಿ ನನ್ನ ಫೋನ್ ಗೆ ಶುಭಾಶಯ ಸೂಚಿಸುವ ಮೆಸೇಜ್ ಬಂತು. ನಾನು ಇದಕ್ಕೆ ರಿಪ್ಲೈ ಕೊಡಲು ಫೋನ್ ತೆಗೆದುಕೊಂಡೆ, ಅಷ್ಟೊತ್ತಿಗಾಗಲೇ ಎದುರಿನಿಂದ ಇಬ್ಬರು ವ್ಯಕ್ತಿಗಳು ಬರುತ್ತಿರುವುದನ್ನು ಗಮನಿಸಿದೆ. ಭಯದಿಂದ ಕೂಡಲೇ ಕಾರನ್ನು ಎಡ ಬದಿಗೆ ತಿರುಗಿಸಿದೆ' ಎಂದಿದ್ದಾರೆ.

ಘಟನೆಯಲ್ಲಿ ಝಾಂಗ್ ಗೆ ಗಾಯಗಳಾಗಿವೆ. ಸದ್ಯ ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ.