ಅಮೆರಿಕ ಅಣ್ವಸ್ತ್ರ ಪರೀಕ್ಷೆಗೆ ಮುಂದಾಗಿರುವ ಹೊತ್ತಿನಲ್ಲಿ, ಚೀನಾ ತನ್ನ 3ನೇ ಅತ್ಯಾಧುನಿಕ ವಿಮಾನವಾಹಕ ಯುದ್ಧ ನೌಕೆ ‘ಫುಜಿಯಾನ್‌’ ಅನ್ನು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಸಮ್ಮುಖದಲ್ಲಿ ನಿಯೋಜನೆ ಮಾಡಿದೆ.

ಬೀಜಿಂಗ್‌: ಅಮೆರಿಕ ಅಣ್ವಸ್ತ್ರ ಪರೀಕ್ಷೆಗೆ ಮುಂದಾಗಿರುವ ಹೊತ್ತಿನಲ್ಲಿ, ಚೀನಾ ತನ್ನ 3ನೇ ಅತ್ಯಾಧುನಿಕ ವಿಮಾನವಾಹಕ ಯುದ್ಧ ನೌಕೆ ‘ಫುಜಿಯಾನ್‌’ ಅನ್ನು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಸಮ್ಮುಖದಲ್ಲಿ ನಿಯೋಜನೆ ಮಾಡಿದೆ.

ಸನ್ಯಾ ಬಂದರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮ

ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದಲ್ಲಿರುವ ಸನ್ಯಾ ಬಂದರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಇದನ್ನು ಗೌಪ್ಯವಾಗಿ ನಿಯೋಜಿಸಲಾಗಿದೆ ಎಂದು ಚೀನಾದ ಕ್ಸಿನ್ಹುವಾ ಪತ್ರಿಕೆ ವರದಿ ಮಾಡಿದೆ.

ಎಲೆಕ್ಟ್ರೋಮ್ಯಾಗ್ನೆಟಿಕ್‌ ಕ್ಯಾಟಾಪುಲ್ಟ್ಸ್‌ ತಂತ್ರಜ್ಞಾನ ಇದೆ

ಫುಜಿಯಾನ್‌ನಲ್ಲಿ, ಪ್ರಸ್ತುತ ಅಮೆರಿಕದ ಯುದ್ಧನೌಕೆಯಲ್ಲಷ್ಟೇ ಇರುವ ಎಲೆಕ್ಟ್ರೋಮ್ಯಾಗ್ನೆಟಿಕ್‌ ಕ್ಯಾಟಾಪುಲ್ಟ್ಸ್‌(ವಿದ್ಯುತ್‌ ಮತ್ತು ಅಯಸ್ಕಾಂತವನ್ನು ಬಳಸಿ ಯುದ್ಧವಿಮಾನ ಉಡಾವಣೆ ಮಾಡುವುದು) ತಂತ್ರಜ್ಞಾನ ಇದೆ.ಇಂಧನ ಭರ್ತಿಯಿದ್ದಾಗ 80000 ಟನ್‌ ತೂಗುವ ಫುಜಿಯಾನ್‌, ಚೀನಾದ ಬಳಿ ಇರುವ ಅತಿ ದೊಡ್ಡ ವಿಮಾನವಾಹಕ ನೌಕೆಯಾಗಿದೆ. ಇದನ್ನು ತೈವಾನ್‌ ಬಳಿ ದಕ್ಷಿಣ ಚೀನಾ ಪ್ರದೇಶದಲ್ಲಿ ನಿಯೋಜಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. ಅವುಗಳನ್ನು ಹಿಂದೂ ಮಹಾಸಾಗರ ಅಥವಾ ಅರಬ್ಬೀ ಸಮುದ್ರದಲ್ಲೂ ನಿಯೋಜಿಸುವ ಆತಂಕವಿದೆ. ಅತ್ತ ಚೀನಾ ದಾಲಿಯಾನ್‌ ಹೆಸರಿನ 4ನೇ ನೌಕೆಯನ್ನು ನಿರ್ಮಿಸುತ್ತಿದ್ದು, ಅದು ಅಣುಚಾಲಿತವಾಗಿರಲಿದೆ ಎಂದೂ ವರದಿಯಾಗಿದೆ.