ಬೀಜಿಂಗ್‌(ಜು.20): ಚೀನಾದ ಅನ್ಹುಯಿ ಪ್ರಾಂತ್ಯದಲ್ಲಿ ಎಡೆಬಿಡದ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಉಕ್ಕೇರಿದ ನದಿಯಿಂದ ಪೂರ್ಣಪ್ರಮಾಣದಲ್ಲಿ ನೀರು ಬಿಟ್ಟರೂ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಅಣಕಟ್ಟೊಂದನ್ನು ಸ್ಫೋಟಿಸಲಾಗಿದೆ.

ಯಾಂಗ್‌ತ್ಸೆ ನದಿಯ ಉಪನದಿಯಾದ ಚುಚೆ ನದಿಯಲ್ಲಿ ಭಾರೀ ಪ್ರಮಾಣದ ಪ್ರವಾಹ ಸೃಷ್ಟಿಯಾಗಿದೆ. ಪ್ರವಾಹದ ಒತ್ತಡವನ್ನು ನಿಯಂತ್ರಿಸಲು ಈ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಅಣೆಕಟ್ಟೊಂದನ್ನು ಸ್ಫೋಟಕ ಬಳಸಿ ಭಾನುವಾರ ಬೆಳಗ್ಗೆ ಧ್ವಂಸಗೊಳಿಸಲಾಗಿದೆ. ಇದರಿಂದಾಗಿ ನೀರಿನ ಮಟ್ಟ2 ಅಡಿಯಷ್ಟುಇಳಿಯುವ ನಿರೀಕ್ಷೆಯಿದೆ.

ಚೀನಾದಲ್ಲಿ ಈ ವರ್ಷ ಅತಿಶಯ ಮಳೆಯಾಗುತ್ತಿದ್ದು, 433 ನದಿಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ವಿಶ್ವದ ಅತಿ ದೊಡ್ಡ ಅಣೆಕಟ್ಟೆಯಾದ ತ್ರೀ ಗಾರ್ಜಸ್‌ ಡ್ಯಾಂನಲ್ಲಿ ಪ್ರವಾಹವು ಸಾಮಾನ್ಯ ಮಟ್ಟಕ್ಕಿಂತ 15 ಮೀ. ಏರಿದ ಕಾರಣ ಕಳೆದ ವಾರ 3 ಫ್ಲಡ್‌ಗೇಟ್‌ ತೆರೆಯಲಾಗಿತ್ತು. ಜೂನ್‌ನಿಂದ ಮಳೆಗೆ ಚೀನಾದಲ್ಲಿ 140 ಜನರು ಮೃತಪಟ್ಟಿದ್ದಾರೆ. 37.89 ಲಕ್ಷ ಜನರು ಬಾಧಿತರಾಗಿದ್ದಾರೆ. 2.24 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅನೇಕ ಊರುಗಳು ಮುಳುಗಡೆ ಆಗವೆ.

ಪ್ರವಾಹ ಸ್ಥಿತಿ ಕೈಮೀರಿದರೆ ಡ್ಯಾಂ ಸ್ಫೋಟ ಮಾಡುವ ನಿರ್ಣಯವನ್ನು ಚೀನಾ 1998ರಲ್ಲೇ ತೆಗೆದುಕೊಂಡಿತ್ತು. ಆಗ ಪ್ರವಾಹದಲ್ಲಿ 2000 ಜನರು ಮೃತಪಟ್ಟು 30 ಲಕ್ಷ ಮನೆ ಧ್ವಂಸವಾಗಿದ್ದವು.