Asianet Suvarna News Asianet Suvarna News

ಮಧ್ಯದಲ್ಲೇ ಸ್ಥಗಿತಗೊಂಡ ಯಂತ್ರ: ತಲೆಕೆಳಗಾಗಿ ನೇತಾಡಿದ ಪ್ರವಾಸಿಗರು : ವಿಡಿಯೋ

ಮನೋರಂಜನಾ ಪಾರ್ಕ್‌ನಲ್ಲಿ ಜನರ ರಂಜಿಸಲು ಇದ್ದಂತಹ ಆಟೋಪಕರಣವೊಂದು ತಾಂತ್ರಿಕ ದೋಷದ ಪರಿಣಾಮ ನಡು ಆಕಾಶದಲ್ಲಿ ಜನ ಇರುವಾಗಲೇ ಸ್ಥಗಿತಗೊಂಡ ಪರಿಣಾಮ ಪ್ರವಾಸಿಗರು ತಲೆಕೆಳಗಾಗಿ ತ್ರಿಶಂಕು ಸ್ಥಿತಿಯಲ್ಲಿ ಇರಬೇಕಾದಂತಹ ಘಟನೆ ನಡೆದಿದೆ. 

China Amusement Park Ride Machine stuck in mid air Tourists hanging upside down in the sky Video akb
Author
First Published Jan 23, 2023, 9:26 PM IST

ಚೀನಾ: ವಂಡರ್‌ಲಾ, ಜಿವಿಆರ್ ಮುಂತಾದ ಮನೋರಂಜನಾ ಪಾರ್ಕ್‌ನಲ್ಲಿ ನೀವು ಆಕಾಶದೆತ್ತರಕ್ಕೆ ಹೋಗುವ ಉಲ್ಟಾ ಉಲ್ಟಾ ತಿರುಗಿ ಹೊಟ್ಟೆಯೊಳಗೆ ಬಾವಳಿ ಬರುವಂತೆ ಮಾಡುವಂತಹ ಹಲವು ಮನೋರಂಜನಾ ಆಟೋಪಕರಣಗಳನ್ನು ನೋಡಿರಬಹುದು. ಅದೇ ರೀತಿ ಚೀನಾದಲ್ಲೂ ಮನೋರಂಜನಾ ಪಾರ್ಕ್‌ನಲ್ಲಿ ಜನರ ರಂಜಿಸಲು ಇದ್ದಂತಹ ಆಟೋಪಕರಣವೊಂದು ತಾಂತ್ರಿಕ ದೋಷದ ಪರಿಣಾಮ ನಡು ಆಕಾಶದಲ್ಲಿ ಜನ ಇರುವಾಗಲೇ ಸ್ಥಗಿತಗೊಂಡ ಪರಿಣಾಮ ಪ್ರವಾಸಿಗರು ತಲೆಕೆಳಗಾಗಿ ತ್ರಿಶಂಕು ಸ್ಥಿತಿಯಲ್ಲಿ ಇರಬೇಕಾದಂತಹ ಘಟನೆ ನಡೆದಿದೆ. 

ಮನೋರಂಜನಾ ಪಾರ್ಕ್‌ನಲ್ಲಿ ಜನ ಇಂತಹ ಉಪಕರಣಗಳಲ್ಲಿ ಸಾಹಸದಾಟವಾಡಿ ಥ್ರಿಲ್ ಅನುಭವಿಸಲು ಬಯಸುತ್ತಾರೆ. ಅದೇ ರೀತಿ ಚೀನಾದಲ್ಲೂ ಜನ ಈ ರೀತಿ ಮೋಜು ಮಾಡಲು ಮನೋರಂಜನಾ ತಾಣಕ್ಕೆ ತೆರಳಿದ್ದು, ಅವರ ಗ್ರಹಚಾರ ಕೆಟ್ಟಿತ್ತು ಏನೋ ನಡು ಆಕಾಶದಲ್ಲಿ ಅದೂ ತಲೆಕೆಳಗಾಗಿ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ  ಆಘಾತಕಾರಿ ಕ್ಷಣದ ವಿಡಿಯೋವೊಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೀನಾದ (china) ಅನ್ಹುಯಿ ಪ್ರಾಂತ್ಯದ ಫ್ಯೂಯಾಂಗ್ ನಗರದ ಮನೋರಂಜನಾ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರ ತಂಡವೊಂದು ಆಕಾಶದೆತ್ತರಕ್ಕೆ ಸಾಗಿ ಕೆಳಗಿಳಿಯುವ ಈ ಸಾಹಸಿ ಆಟೋಪಕರಣದ ಮೇಲೇರಿದ್ದಾರೆ. ಆದರೆ  ಸ್ವಲ್ಪ ಹೊತ್ತಿನಲ್ಲೇ ಇದರಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಪ್ರವಾಸಿಗರು (Tourist) ಸುಮಾರು 10 ನಿಮಿಷಗಳ ಕಾಲ  ತಲೆಕೆಳಗಾಗಿ ನಡು ಆಗಸದಲ್ಲಿ ಕುಳಿತ ಸ್ಥಳದಲ್ಲಿಯೇ ಇರುವಂತಾಗಿತ್ತು.  

 

ಜನವರಿ 19 ರಂದು ಈ ಘಟನೆ ನಡೆದಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಪ್ರವಾಸಿಗರು ಕಾಲು ಮೇಲಾಗಿ ತಲೆ ಕೆಳಗಾಗಿ  ಯಂತ್ರದಲ್ಲಿ ಸಿಲುಕಿಕೊಂಡಿರುವುದು ಕಾಣಿಸುತ್ತಿದೆ.  ತಾಂತ್ರಿಕ ದೋಷದಿಂದ (mechanical failure) ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.  ಕೂಡಲೇ ಈ ಚೈನೀಸ್ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿದ್ದ ಕಾರ್ಮಿಕರು ಮತ್ತು ಸಿಬ್ಬಂದಿ ದೈತ್ಯ ಪೆಂಡಾಲ್ ರೈಡ್ ಅನ್ನು ಸರಿಪಡಿಸಲು ಪ್ರಯತ್ನಿಸಿದರಾದರು ಅದು ಯಶಸ್ವಿಯಾಗಲಿಲ್ಲ. ನಿಯಂತ್ರಣ ಫಲಕವನ್ನು ಮರು ಪ್ರಾರಂಭಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹಲವಾರು ಪ್ರಯತ್ನಗಳ ನಂತರ, ಅಧಿಕಾರಿಗಳು ಮೆಟ್ಟಿಲ ಮೂಲಕ ಕಂಬಗಳನ್ನು ಏರಿ ರೈಡ್ ಅನ್ನು ಹಸ್ತಚಾಲಿತವಾಗಿ ಸರಿಪಡಿಸಲು ನಿರ್ಧರಿಸಿದರು.

 

ಮಿತಿ ಮೀರಿದ ತೂಕದಿಂದಾಗಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಸುಮಾರು 10 ನಿಮಿಷಗಳ ನಂತರ ಅಧಿಕಾರಿಗಳು ಈ ಯಂತ್ರವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ನಂತರ ಪ್ರವಾಸಿಗರಿಗೆ  ಅವರ ಹಣ ಮರಳಿಸಲು ಮನೋರಂಜನಾ ಪಾರ್ಕ್ ಸಿಬ್ಬಂದಿ ನಿರ್ಧರಿಸಿದ್ದಾರೆ. ಜೊತೆಗೆ ವೈದ್ಯಕೀಯ ಸಹಾಯ ನೀಡುವುದಾಗಿ ಹೇಳಿದ್ದಾರೆ. 

ಮನೋರಂಜನಾ ಪಾರ್ಕ್‌ಗಳು (Amusement Park) ಜನರು ಆನಂದಿಸುವ ಮತ್ತು ಥ್ರಿಲ್ ಪಡೆಯುವ ಮೋಜಿನ ಸ್ಥಳಗಳಾಗಿವೆ. ಆದರೆ ಕೆಲವರಿಗೆ, ವೇಗವಾಗಿ ಚಲಿಸುವ, ಸುತ್ತುತ್ತಿರುವ ಟ್ರ್ಯಾಕ್ ಅನ್ನು ಸವಾರಿ ಮಾಡುವ ಮತ್ತು ಅದರಲ್ಲಿ ಕೆಳಗಿಳಿಯುವ ಕಲ್ಪನೆ ಭಯ ಮೂಡಿಸುತ್ತದೆ. ಕೆಲವರಿಗೆ ಹೊಟ್ಟೆಯಲ್ಲಿ ಬಾವಳಿ ಬಂದಂತಾಗಿ ವಾಂತಿ ಮಾಡಿಕೊಳ್ಳುತ್ತಾರೆ.  ಮತ್ತೆ ಕೆಲವರು ಜೋರಾಗಿ ಕಿರುಚುವ ಮೂಲಕ ಇತರರಿಗೆ ಮೋಜು ಅನುಭವಿಸಲು ಬಂದವರಿಗೆ ಇನ್ನಷ್ಟು ಮಜಾ ನೀಡುತ್ತಾರೆ. ಆದರೆ ಇಂತಹ ಸನ್ನಿವೇಶಗಳು ಜೀವಕ್ಕೆ ಎರವಾಗಬಹುದು. 

ಮನೋರಂಜನಾ ಪಾರ್ಕ್‌ನಲ್ಲಿ ಬಾಲಕನ ಒಂಟಿ ರೈಡ್: ವಿಡಿಯೋ ವೈರಲ್

Follow Us:
Download App:
  • android
  • ios