* ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿ ತಾಲಿಬಾನಿಗಳ ವಿಜಯೋತ್ಸವ* ಸಂಭ್ರಮಾಚರಣೆಯಲ್ಲಿ ಮಕ್ಕಳು ಸೇರಿದಂತೆ 17ಕ್ಕೂ ಹೆಚ್ಚು ಮಂದಿ ಸಾವು 

ಕಾಬೂಲ್‌(: ತಾಲಿಬಾನಿಗಳು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿ ಕಾಬೂಲ್‌ ಹಾಗೂ ಸುತ್ತ​ಮುತ್ತ ನಡೆಸಿದ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಮಕ್ಕಳು ಸೇರಿದಂತೆ 17ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಇಡೀ ಆಫ್ಘನ್‌ ಅನ್ನು ವಶಪಡಿಸಿಕೊಂಡ ತಾಲಿಬಾನಿಗಳ ವಿರುದ್ಧ ಪಂಜ್‌ಶೀರ್‌ ಕಣಿವೆಯ ತಾಲಿಬಾನ್‌ ವಿರೋಧಿ ಪಡೆ ತಿರುಗಿಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಪಂಜ್‌ಶೀರ್‌ ಕಣಿವೆ ವಶಕ್ಕೆ ಪಡೆಯುವುದು ತಾಲಿಬಾನ್‌ಗೆ ಸವಾಲಾಗಿತ್ತು. ಆದರೆ ಶುಕ್ರವಾರ ರಾತ್ರಿ ತಮ್ಮ ವಿರೋಧಿ ಪಡೆಗಳಿಂದ ಪಂಜ್‌ಶೀರ್‌ ಕಣಿವೆಯನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನಿಗಳು ಘೋಷಿಸಿಕೊಂಡಿದ್ದಾರೆ.

ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿದ ಈ ಘಟನೆಯಲ್ಲಿ ಹಲವರು ಸಾವಿಗೀಡಾದ ದುರಂತ ನಡೆದಿದೆ. ಗಾಯಗೊಂಡವರನ್ನು ಅವರ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.