ಸಹೋದರ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ವ್ಯಕ್ತಿ 20  ವರ್ಷ ಜೈಲು ಶಿಕ್ಷೆ ಅನುಭವಿಸಿದ  44 ವರ್ಷದ ಕೆವಿನ್ ಡುಗರ್ ಅಮೆರಿಕಾದ ಚಿಕಾಗೋದಲ್ಲಿ ಘಟನೆ

ಒಬ್ಬ ಅಪರಾಧಿಗೆ ಶಿಕ್ಷೆಯಾಗದೇ ಹೋದರೂ ಪರವಾಗಿಲ್ಲ. ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ಹೇಳುತ್ತದೆ ನಮ್ಮ ಕಾನೂನು. ಆದರೆ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಮಾಡದ ತಪ್ಪಿಗೆ ಸುಮಾರು 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಇಂತಹ ವಿಚಿತ್ರ ಘಟನೆ ನಡೆದಿದ್ದು, ಅಮೆರಿಕಾದ ಚಿಕಾಗೋದಲ್ಲಿ. ಪ್ರಪಂಚದಲ್ಲಿ ಒಂದೇ ರೀತಿಯ ಏಳು ವ್ಯಕ್ತಿಗಳು ಇರುತ್ತಾರೆ ಎಂಬ ನಂಬಿಕೆ ಇದೆ. ಹಾಗೆಯೇ ಓರ್ವ ತಾನು ಏನೂ ಅಪರಾಧವೇ ಮಾಡದಿದ್ದರೂ, ಅಪರಾಧವೆಸಗಿದ ವ್ಯಕ್ತಿಯಂತೆ ಇದ್ದ ಕಾರಣಕ್ಕೆ ಬರೋಬರಿ 20 ವರ್ಷ ಶಿಕ್ಷೆ ಅನುಭವಿಸುವಂತಾಗಿದೆ. ಯಾವುದೋ ಸಿನಿಮಾದಲ್ಲಿ ನಡೆದಂತಿರುವ ನಿಜ ಘಟನೆ ಇಲ್ಲಿದೆ ನೋಡಿ.

ಅಮೆರಿಕಾದ ಚಿಕಾಗೋದಲ್ಲಿ ಜನವರಿ 25 ರಂದು ವ್ಯಕ್ತಿಯೊಬ್ಬ ಬರೋಬರಿ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಈಗ ಬಿಡುಗಡೆಯಾಗಿದ್ದಾನೆ. ಈತನ ಬಿಡುಗಡೆಗೆ ಕಾರಣ ಈತನಂತೆ ಇರುವ ಅವಳಿ ಸಹೋದರ ತನ್ನ ಅಪರಾಧವನ್ನು ಒಪ್ಪಿಕೊಂಡಿರುವುದು. 44 ವರ್ಷದ ಕೆವಿನ್ ಡುಗರ್ (Kevin Dugar) ಎಂಬಾತನಿಗೆ 2003 ರಲ್ಲಿ ನಡೆದ ಮಾರಣಾಂತಿಕ ಗುಂಡಿನ ದಾಳಿಯ ಅಪರಾಧಿ ಎಂದು ಸಾಬೀತಾಗಿ 2005 ರಲ್ಲಿ 54 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಕಳೆದ ವಾರ, ಅವರು ನಿಜವಾದ ಅಪರಾಧಿ ಅಲ್ಲ ಎಂದು ದೃಢವಾದ ನಂತರ ಚಿಕಾಗೋದ ಕುಕ್ ಕೌಂಟಿ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲಾಯಿತು.

ಚೀನಾದಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡುತ್ತೆ ಈ ಯಂತ್ರ, ವಿಜ್ಞಾನಿಗಳು ತಯಾರಿಸಿದ AI 'Prosecutor'!

2016 ರಲ್ಲಿ ಕೆವಿನ್ ಅವರ ಸಹೋದರ ಕಾರ್ಲ್ ಸ್ಮಿತ್ ಅವರು ಶೂಟಿಂಗ್ ಪ್ರಕರಣದ ಅಪರಾಧಿ ನಾನೇ ಎಂದು ಮೊದಲ ಬಾರಿಗೆ ತಪ್ಪೊಪ್ಪಿಕೊಂಡು ತನ್ನ ಸಹೋದರನಿಗೆ ಪತ್ರ ಬರೆದಿದ್ದರು ಇದರಿಂದ ಪ್ರಕರಣಕ್ಕೆ ಆಘಾತಕಾರಿ ತಿರುವು ಸಿಕ್ಕಿತ್ತು. ವರದಿಗಳ ಪ್ರಕಾರ ಸೆಪ್ಟೆಂಬರ್ 2016 ರಲ್ಲಿ ಲೈಟನ್ ಕ್ರಿಮಿನಲ್ ಕೋರ್ಟ್‌ನಲ್ಲಿ ಕಾರ್ಲ್ ತಮ್ಮ ಅಪರಾಧವನ್ನು ಒಪ್ಪಿಕೊಂಡರು. ನಾನು ಮತ್ತು ಡುಗರ್ ಅವರು ಬಾಲ್ಯದಿಂದಲೂ ನಾವಿಬ್ಬರೂ ಒಂದೇ ಎಂಬಂತೆ ವರ್ತಿಸುತ್ತಿದ್ದೆವು. ಅವನು ನನ್ನಂತೆ ನಟಿಸಿದ ಮತ್ತು ನಾನು ಅವನಂತೆ ನಟಿಸಿದೆ ಎಂದು ಅವರು ವಿವರಿಸಿದರು.

ಆದರೆ ನ್ಯಾಯಾಧೀಶರು ಸ್ಮಿತ್ ಅವರ ತಪ್ಪೊಪ್ಪಿಗೆಯನ್ನು ನಂಬಲರ್ಹವಾಗಿಲ್ಲ ಎಂದು ತೀರ್ಪು ನೀಡಿದ್ದರು. ಅಲ್ಲದೇ ಆದರ ವಿರುದ್ಧ ಮೇಲ್ಮನವಿ ಹಾಕುವ ಅವಕಾಶವನ್ನು ಕೂಡ ರದ್ದುಗೊಳಿಸಿದರು. ಆದರೆ ಹೊಸ ಜಡ್ಜ್‌ ಒಬ್ಬರು ಕಾರ್ಲ್‌ ಸ್ಮಿತ್‌ನ ತಪ್ಪೊಪ್ಪಿಗೆಯನ್ನು ಪರಿಶೀಲಿಸಿ ಡುಗರ್‌ ಬಿಡುಗಡೆಯಾಗಬೇಕು ಎಂದು ಮನವಿ ಮಾಡಿದರು. ಆದರೆ ಸರ್ಕಾರವೂ ಪ್ರಕರಣವನ್ನು ಕೈಬಿಡದಿದ್ದರೆ ಕೆವಿನ್‌ ಡುಗರ್ ಇನ್ನೂ ವಿಚಾರಣೆಯನ್ನು ಎದುರಿಸಬಹುದು ಎಂದು ಅವರ ವಕೀಲ ಹೇಳಿದ್ದಾರೆ. ಅದಾಗ್ಯೂ ಕಳೆದ ವಾರ ಕೆವಿನ್ ಡುಗರ್ ಅವರ ಬಿಡುಗಡೆ ಮಾಡಲಾಗಿದೆ. 

Accident Case: 22 ಸಾವಿಗೆ ಕಾರಣವಾದ ಬಸ್‌ ಚಾಲಕನಿಗೆ 190 ವರ್ಷ ಜೈಲು!

ಡುಗರ್ ಅವರನ್ನು ಕುಕ್ ಕೌಂಟಿ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಈ ವೇಳೆ ಅವರು ಭಾವುಕರಾಗಿ ಕಣ್ಣೀರಿಟ್ಟರು. ಡುಗರ್‌ ತಮ್ಮ ಇಡೀ ಜೀವನವನ್ನು ಜೈಲಿನಲ್ಲೇ ಕಳೆಯುತ್ತಾರೆ ಎಂದು ಭಾವಿಸಿದ್ದರು ಎಂದು ಅವರ ವಕೀಲ ರೊನಾಲ್ಡ್ ಸೇಫರ್ (Ronald Safer) ಎನ್‌ಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ. ಅವರ ವಕೀಲರ ಪ್ರಕಾರ ದುಗರ್ ಈಗ ಜೈಲಿನ ಹೊರಗಿನ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಕೆವಿನ್ ಬಂಧ ಮುಕ್ತವಾಗಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಹೊಂದಾಣಿಕೆ ಸುಲಭವಲ್ಲ. ಮಾಡದ ತಪ್ಪಿನಿಂದಾದ ಸೆರೆವಾಸದಿಂದ ಉಂಟಾದ ಗಾಯದಿಂದ ಮನಸ್ಸಿಗೆ ಆಳವಾದ ನೋವಾಗಿದ್ದು, ನಿಧಾನವಾಗಿ ಆ ದುಃಖದಿಂದ ಹೊರ ಬರುತ್ತಿದ್ದಾರೆ ಎಂದರು. 

2003 ರಲ್ಲಿ ಚಿಕಾಗೋದ(Chicago) ಅಪ್‌ಟೌನ್ ಪ್ರದೇಶದಲ್ಲಿ (Uptown area) ಬಂದೂಕುಧಾರಿಯೊಬ್ಬ ಮೂವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಇದರಲ್ಲಿ ಆಂಟ್ವಾನ್ ಕಾರ್ಟರ್‌( Antwan Carter) ಎಂಬಾತ ಮೃತಪಟ್ಟು ರೋನಿ ಬೋಲ್ಡೆನ್ (Ronnie Bolden) ಎಂಬಾತ ಗಾಯಗೊಂಡಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆವಿನ್ ಡುಗರ್‌ಗೆ ಶಿಕ್ಷೆಯಾಗಿತ್ತು.