Asianet Suvarna News Asianet Suvarna News

ಬಾಂಗ್ಲಾ ಹಿಂದುಗಳ ಮೇಲಿನ ದಾಳಿ ರೂವಾರಿ ಬಂಧನ!

* ಬಾಂಗ್ಲಾ ಹಿಂದುಗಳ ಮೇಲಿನ ದಾಳಿ ರೂವಾರಿ ಬಂಧನ

* ದುರ್ಗೆ ಪಾದದ ಬಳಿ ಕುರಾನ್‌ ಇಟ್ಟಿದ್ದ ಶಂಕಿತನ ಸೆರೆ

* ಸಿಸಿಟೀವಿ ಕ್ಯಾಮೆರಾ ಆಧಾರಿಸಿ ಪೊಲೀಸರ ಕಾರಾರ‍ಯಚರಣೆ

 

CCTV footage helps Bangladesh police identify and arrest man behind blasphemous incident in Comilla pod
Author
Bangalore, First Published Oct 23, 2021, 11:27 AM IST

ಢಾಕಾ(ಅ.23): ಬಾಂಗ್ಲಾದೇಶದಲ್ಲಿ(Bangladesh) ದಸರಾ ಪ್ರಯುಕ್ತ ನಡೆಯುತ್ತಿರುವ ದುರ್ಗಾ ಪೂಜೆ(Durga Pooja) ಪೆಂಡಾಲ್‌ಗಳು, ದೇವಸ್ಥಾನಗಳು(Temple) ಮತ್ತು ಅಲ್ಪಸಂಖ್ಯಾತ ಹಿಂದುಗಳ(Hindus) ಮೇಲೆ ನಡೆಯುತ್ತಿರುವ ಸರಣಿ ಹಿಂಸಾಚಾರ ದಾಳಿಗಳ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಶಂಕಿತನನ್ನು ಇಕ್ಬಾಲ್‌ ಹುಸೇನ್‌ ಎಂದು ಗುರುತಿಸಲಾಗಿದೆ.

ಅ.13ರಂದು ಬಾಂಗ್ಲಾದ ಕುಮಿಲಾ ಎಂಬ ಪ್ರದೇಶದಲ್ಲಿ ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ದುರ್ಗೆಯ ಪಾದದ ಬಳಿ ಕುರಾನ್‌ ಪುಸ್ತಕವನ್ನು ಇಟ್ಟಿದ್ದ ಶಂಕಿತ ಈತನೇ ಇರಬಹುದು ಎನ್ನಲಾಗಿದೆ. ತನ್ಮೂಲಕ ಕಳೆದ 10 ದಿನಗಳಿಂದ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಸರಣಿ ಹಿಂಸಾಚಾರ ಕೃತ್ಯಗಳಿಗೆ ಕಾರಣನಾದ ರೂವಾರಿಯನ್ನು ಪೊಲೀಸರು ಬಂಧಿಸಿದಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ಕುಮಿಲಾ ಪ್ರದೇಶದಲ್ಲಿ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾವನ್ನು ಆಧರಿಸಿ ಆರೋಪಿ ಬಂಧನಕ್ಕಾಗಿ ತ್ವರಿತ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಳೆದೊಂದು ವಾರದಿಂದ ಕೋಮು ದ್ವೇಷಕ್ಕೆ ಕಾರಣವಾಗಿದ್ದ ಪ್ರಮುಖ ಶಂಕಿತನನ್ನು ಬಂಧಿಸುವಲ್ಲಿ ನಾವು ಯಶಸ್ವಿಯಾಗಿದ್ದು, ಆತನನ್ನು ಬಿಗಿ ಭದ್ರತೆಯಲ್ಲಿ ಇಡಲಾಗಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಆತನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಕೋರಿಕೊಳ್ಳುತ್ತೇವೆ. ಆ ಬಳಿಕ ಭದ್ರತಾ ಪಡೆಗಳು, ಗುಪ್ತಚರ ಸಂಸ್ಥೆಗಳು ಶಂಕಿತನನ್ನು ವಿಚಾರಣೆ ನಡೆಸಲಿವೆ’ ಎಂದು ಹೇಳಿದರು.

ದುರ್ಗಾಪೂಜೆಯ ಪೆಂಡಾಲ್‌ನಲ್ಲಿ ದುರ್ಗೆಯ ಪಾದದ ಬಳಿ ಕುರಾನ್‌ ಇಟ್ಟು ಅಪಮಾನ ಎಸಗಲಾಗಿದೆ ಎಂಬ ವದಂತಿಯಿಂದಾಗಿ ಬಾಂಗ್ಲಾದೇಶದಲ್ಲಿ ರೊಚ್ಚಿಗೆದ್ದ ಒಂದು ಕೋಮಿನವರು ಅಲ್ಪಸಂಖ್ಯಾತರ ಮೇಲೆ ಬೇಕಾಬಿಟ್ಟಿಯಾಗಿ ದಾಳಿ ನಡೆಸಿದ್ದರು. ಈ ವೇಳೆ ಸುಮಾರು 70ಕ್ಕೂ ಹೆಚ್ಚು ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲದೆ ಹಿಂದುಗಳ 20 ಮನೆಗಳಿಗೆ ಬೆಂಕಿ ಹಚ್ಚಿರುವ ಉದ್ರಿಕ್ತರು, 60ಕ್ಕೂ ಹೆಚ್ಚು ಮನೆಗಳನ್ನು ಕೆಡವಿ ಹಾಕಿದ್ದಾರೆ. ಹೀಗಾಗಿ ಬಾಂಗ್ಲಾದಲ್ಲಿರುವ ಹಿಂದುಗಳ ಭದ್ರತೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕ ಎದುರಾಗಿತ್ತು. ಹಿಂಸಾಚಾರಗಳ ನಿಯಂತ್ರಣಕ್ಕಾಗಿ ಫೇಸ್ಬುಕ್‌ ಮತ್ತು ಇಂಟರ್‌ನೆಟ್‌ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಹೇರಲಾಗಿತ್ತು.

ಆತ ಮಾನಸಿಕ ಅಸ್ವಸ್ಥ- ಕುಟುಂಬಸ್ಥರು:

ಇನ್ನು ಇಕ್ಬಾಲ್‌ ಹುಸೇನ್‌ನನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆತನ ಕುಟುಂಬ ಸದಸ್ಯರು ಇಕ್ಬಾಲ್‌ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಹೇಳಿದ್ದಾರೆ. ಒಂದು ವೇಳೆ ಇಕ್ಬಾಲ್‌ ಮಾನಸಿಕ ಅಸ್ವಸ್ಥ ಎಂಬುದು ಸತ್ಯವಾಗಿದ್ದರೆ, ಬಾಂಗ್ಲಾದಲ್ಲಿ ಸಮುದಾಯಗಳ ಮಧ್ಯೆ ಕೋಮುದ್ವೇಷ ಹರಡಲು ಪಟ್ಟಭದ್ರ ಹಿತಾಸಕ್ತಿಗಳು ಈತನನ್ನು ದುರುಪಯೋಗಪಡಿಸಿಕೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

Follow Us:
Download App:
  • android
  • ios