Asianet Suvarna News Asianet Suvarna News

ಕೋವಿ​ಶೀಲ್ಡ್‌ ಪಡೆ​ದ​ವ​ರಿ​ಗೆ ಅನೇಕ ದೇಶ​ಗಳ ಕೆಂಪು​ಹಾ​ಸಿನ ಸ್ವಾಗ​ತ!

* ಭಾರತೀಯರು ಯಾವ ದೇಶ​ಗ​ಳಿಗೆ ತೆರ​ಳ​ಬ​ಹು​ದು?

* ಅಂತಾರಾ​ಷ್ಟ್ರೀ​ಯ ಪ್ರಯಾಣದ ನಿರ್ಬಂಧ ಅನೇಕ ದೇಶ​ಗ​ಳಿಂದ ಸಡಿ​ಲ

* ಕೋವಿ​ಶೀಲ್ಡ್‌ ಪಡೆ​ದ​ವ​ರಿ​ಗೆ ಅನೇಕ ದೇಶ​ಗಳ ಕೆಂಪು​ಹಾ​ಸಿನ ಸ್ವಾಗ​ತ!

Canada latest in list of countries to allow Indian travellers here are all international destinations open now pod
Author
Bangalore, First Published Sep 27, 2021, 1:27 PM IST

ನವದೆಹಲಿ(ಸೆ.27): ಕೋವಿಡ್‌(Covid 19) ಅಬ್ಬರಕ್ಕೆ ತತ್ತರಿಸಿದ್ದ ಜಗತ್ತು ಅಲ್ಪ ಮಟ್ಟಿಗೆ ಸುಧಾರಿಸುತ್ತಿದೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಲಸಿಕಾ ಕಾರ‍್ಯಕ್ರಮವನ್ನು ಚುರುಕುಗೊಳಿಸುತ್ತಿವೆ. ಜೊತೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಿಮಾನಯಾನದ ಮೇಲಿದ್ದ ನಿರ್ಬಂಧವನ್ನು ಸಡಿಲಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸದ್ಯ ಭಾರತೀಯರು ಯಾವ ಯಾವ ದೇಶಗಳಿಗೆ ಬೇಟಿ ನೀಡಲು ಅವಕಾಶವಿದೆ. ಅಲ್ಲಿರುವ ಷರತ್ತುಗಳೇನು ಎಂಬ ವಿವರ ಇಲ್ಲಿದೆ.

ಬ್ರಿಟನ್‌(Britain)

ಕೋವಿಶೀಲ್ಡ್‌(Covishield) ಲಸಿಕೆಯ(Vaccine) ಎರಡೂ ಡೋಸ್‌ ಪಡೆದ ಭಾರತೀಯರು ಬ್ರಿಟನ್ನಿಗೆ ಪ್ರಯಾಣ ಮಾಡಬಹುದು. ಆದರೆ ಭಾರ​ತದ ಲಸಿಕೆ ಪ್ರಮಾ​ಣ​ಪ​ತ್ರ​ದಲ್ಲಿ ಜನ್ಮ​ದಿ​ನಾಂಕ ನಮೂದು ಆಗಿ​ರದ ಕಾರಣ, 10 ದಿನ ಕ್ವಾರಂಟೈನ್‌ ಆಗ​ಬೇಕು. ಜತೆಗೆ ಬ್ರಿಟನ್ನಿಗೆ ಹೋಗುವುದಕ್ಕಿಂತ 3 ದಿನ ಮೊದಲು ಕೋವಿಡ್‌ ಪರೀಕ್ಷೆಗೆ ಒಳಗಾಗಿ ನೆಗೆಟಿವ್‌ ಬಂದಿರಬೇಕು. ಬ್ರಿಟನ್ನಿಗೆ ತೆರಳಿದ 2 ದಿನದೊಳಗೆ ಹಾಗೂ 8 ದಿನದ ನಂತರ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಮೊದಲೇ ಹಣ ಪಾವತಿಸಬೇಕು. ಲಸಿಕೆ ಪ್ರಮಾ​ಣ​ಪ​ತ್ರ​ದಲ್ಲಿ ಜನ್ಮ​ದಿ​ನಾಂಕ ನಮೂ​ದಾದ ನಂತರ ಕ್ವಾರಂಟೈನ್‌ ನಿಯಮ ಸಡಿ​ಲ​ಗೊ​ಳ್ಳ​ಲಿ​ದೆ ಎಂದು ಬ್ರಿಟನ್‌ ಹೇಳಿ​ದೆ.

ಅಮೆರಿಕ(USA)

2 ಡೋಸ್‌ ಕೋವಿಡ್‌ ಲಸಿಕೆ ಪಡೆದ ಭಾರತೀಯರು ನವೆಂಬರ್‌ನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಬಹುದೆಂದು ಶ್ವೇತಭವನ ಆದೇಶ ಹೊರಡಿಸಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಅಮೆರಿಕದ ಎಫ್‌ಡಿಎನಿಂದ ಮಾನ್ಯತೆ ಪಡೆದ ಲಸಿಕೆಗಳನ್ನು ಹಾಕಿಸಿಕೊಂಡವರು ಮಾತ್ರ ಪ್ರವೇಶಿಸಬಹುದು ಎಂದು ಸ್ಪಷ್ಟಪಡಿಸಿದೆ. ಆದರೆ ಭಾರತ ಮೂಲದ ಎರಡು ಲಸಿಕೆಗಳಾದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಪೈಕಿ ಕೋವಿಶೀಲ್ಡ್‌ ಮಾತ್ರ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿದೆ. ಹಾಗಾಗಿ ಕೋವಿಶೀಲ್ಡ್‌ನ ಎರಡೂ ಡೋಸ್‌ ಪಡೆದವರು ಮಾತ್ರ ಅಮೆರಿಕಕ್ಕೆ ವಿಮಾನಯಾನ ಮಾಡಬಹುದು. ಜೊತೆಗೆ ಪ್ರಯಾಣಕ್ಕೂ 72 ಗಂಟೆ ಮುಂಚಿತವಾಗಿ ಕೋವಿಡ್‌ ಪರೀಕ್ಷೆಗೆ ಒಳಗಾಗಿ ನೆಗೆಟಿವ್‌ ವರದಿಯನ್ನು ಹೊಂದಿರಬೇಕು.

ಕೆನಡಾ(Canada)

ಭಾರತೀಯ ಪ್ರಯಾಣಿಕರ ಪ್ರವೇಶದ ಮೇಲೆ ಕೆನಡಾ ವಿಧಿಸಿದ್ದ ನಿರ್ಬಂಧ ಸೆ.20ಕ್ಕೆ ಅಂತ್ಯಗೊಂಡಿದೆ. ಆದರೆ ಪ್ರಯಾಣಿಕರು 2 ಭಾರತೀಯ ಲಸಿಕೆಗಳ ಪೈಕಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಕೋವಿಶೀಲ್ಡ್‌ ಲಸಿಕೆಯ ಎರಡೂ ಡೋಸ್‌ ಪಡೆದಿರಬೇಕು. ಪ್ರಯಾಣಕ್ಕೂ 18 ಗಂಟೆ ಮುಂಚಿತವಾಗಿ ಕೋವಿಡ್‌ ಪರೀಕ್ಷೆಗೆ ಒಳಗಾಗಿ ನೆಗೆಟಿವ್‌ ವರದಿ ಬಂದಿರಬೇಕು. ವಿಮಾನ ಹಾರಾಟ ನಿರ್ಬಂಧ ಕೂಡ ತೆರ​ವಾ​ಗಿದ್ದು, ಸೋಮ​ವಾ​ರ​ದಿಂದ ಕೆನ​ಡಾ-ಭಾರತ ವಿಮಾ​ನ ಸಂಚಾರ ಆರಂಭ​ವಾ​ಗ​ಲಿ​ದೆ.

ಟರ್ಕಿ(Turkey)

ಈ ಮೊದಲು ಟರ್ಕಿಗೆ ಪ್ರಯಾಣಿಸುವ ಭಾರತೀಯರು 14 ದಿನ ಕ್ವಾರಂಟೈನ್‌ ಒಳಗಾಗಬೇಕಿತ್ತು. ಆದರೆ ಸದ್ಯ ಎರಡೂ ಡೋಸ್‌ ಕೊರೋನಾ ಲಸಿಕೆ ಪಡೆದವರಿಗೆ 14 ದಿನದ ಕ್ವಾರಂಟೈನ್‌ನಿಂದ ವಿನಾಯ್ತಿ ನೀಡಲಾಗಿದೆ.

ಜರ್ಮನಿ(Germany)

ಎರಡೂ ಡೋಸ್‌ ಲಸಿಕೆ ಪಡೆದವರು ಪ್ರಯಾಣಿಸಬಹುದು. ಕ್ವಾರಂಟೈನ್‌ ಅಗತ್ಯವಿಲ್ಲ.

ಸ್ಪೇನ್‌(Spain)

ಭಾರತದ ಕೋವಿಶೀಲ್ಡ್‌ ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಲಸಿಕೆಗಳ ಎರಡೂ ಡೋಸ್‌ ಪಡೆದ ಭಾರತೀಯರು ಸ್ಪೇನ್‌ ದೇಶಕ್ಕೆ ಪ್ರಯಾಣಿಸಬಹುದು. ವಿಶೇಷ ವಿನಾಯ್ತಿ ಪಡೆದ ಪ್ರಯಣಿಕರು ಲಸಿಕೆ ಪ್ರಮಾಣಪತ್ರ ಒದಗಿಸಬೇಕಿಲ್ಲ. ಆದರೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯವಾಗಿ ಹೊಂದಿರಬೇಕು. ಎಲ್ಲಾ ವಿದೇಶಿ ಪ್ರಯಾಣಿಕರೂ ವಿಮಾನ ನಿಲ್ದಾಣದ ಮೊದಲ ಎಂಟ್ರಿ ಪಾಯಿಂಟ್‌ನಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು.

ಒಮಾ​ನ್‌(Oman)

ಎರಡೂ ಡೋಸ್‌ ಕೋವಿಡ್‌ ಲಸಿಕೆ ಪಡೆದ ಭಾರತೀಯರು ಸೆ.1ರಿಂದ ಒಮಾನ್‌ಗೆ ತೆರಳಲು ಅನುಮತಿ ನೀಡಲಾಗಿದೆ. ಜೊತೆಗೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯ. ಆದರೆ ಕೊನೆಯ ಡೋಸ್‌ ಅನ್ನು ಒಮಾನ್‌ಗೆ ಪ್ರಯಾಣಿಸುವ ಕನಿಷ್ಠ 14 ದಿನ ಮುಂಚಿತವಾಗಿ ಪಡೆದಿರಬೇಕು. ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿರುವವರು ಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು. ನೆಗೆಟಿವ್‌ ವರದಿ ಬರುವವರೆಗೂ ಕ್ವಾರಂಟೈನ್‌ ಕಡ್ಡಾಯ.

ಯುಎಇ(UAE)

ಪೂರ್ಣ ಪ್ರಮಾಣದ ಲಸಿಕೆ ಪಡೆದ ಭಾರತೀಯರು ದುಬೈಗೆ ಪ್ರಯಾಣ ಬೆಳೆಸಬಹುದು. ಆದರೆ ಪ್ರಯಾಣಕ್ಕೂ ಮುಂಚಿತವಾಗಿ ಕೋವಿಡ್‌ ಪರೀಕ್ಷೆಗೆ ಒಳಗಾಗಿ ನೆಗೆಟಿವ್‌ ವರದಿ ಪಡೆದಿರಬೇಕು.

ಕುವೈತ್‌(Kuwait)

ಸೆ.7ರಿಂದ ಭಾರತೀಯರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಕುವೈತ್‌ ಕೊನೆ ಮಾಡಿದೆ.

ಥಾಯ್ಲೆಂಡ್‌(Thailand)

ಭಾರತೀಯರು ಥಾಯ್ಲೆಂಡ್‌ಗೆ ಭೇಟಿ ನೀಡಲು ನಿರ್ದಿಷ್ಟವೀಸಾ ವಿತರಿಸುವುದಾಗಿ ನವದೆಹಲಿಯಲ್ಲಿರುವ ಥಾಯ್ಲೆಂಡ್‌ ರಾಯಭಾರ ಕಚೇರಿ ತಿಳಿಸಿದೆ. ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಅಲ್ಲಿನ ನಿವಾಸಿಗಳಿಗೆ ವೀಸಾ ವಿತರಿಸುವುದಾಗಿ ತಿಳಿಸಿದೆ. ಆದರೆ ಮೆಡಿಕಲ್‌ ಮತ್ತು ಟೂರಿಸ್ಟ್‌ ವೀಸಾವನ್ನು ಇನ್ನೂ ವಿತರಿಸಲು ಆರಂಭಿಸಿಲ್ಲ.

ಕೋವಿಶೀಲ್ಡ್‌ ಪಡೆದು ಯುರೋಪಿನ 16 ದೇಶಗಳಿಗೆ ಪ್ರಯಾಣಿಸಬಹುದು!

ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಭಾರತೀಯ ಮೂಲದ ಕೋವಿಶೀಲ್ಡ್‌ ಲಸಿಕೆ ಪಡೆದು ಫ್ರಾನ್ಸ್‌, ಆಸ್ಪ್ರೇಲಿಯಾ, ಬೆಲ್ಜಿಯಂ, ಬಲ್ಗೇರಿಯಾ, ಫಿನ್‌ಲ್ಯಾಂಡ್‌, ಜರ್ಮನಿ, ಗ್ರೀಸ್‌, ಹಂಗೇರಿ, ಐಲೆಂಡ್‌, ನೆದರ್ಲೆಂಡ್‌, ಸ್ಲೋವೇನಿಯಾ, ಸ್ಪೇನ್‌, ಸ್ವೀಡನ್‌, ಸ್ವಿಡ್ಜರ್‌ಲೆಂಡ್‌ ಸೇರಿದಂತೆ ಮುಂತಾದ ದೇಶಗಳಿಗೆ ಪ್ರಯಾಣಿಸಬಹುದು.

ಕೋವ್ಯಾಕ್ಸಿನ್‌ಗೆ(Covaxin) ಸಮ​ಸ್ಯೆ

ಕೋವ್ಯಾ​ಕ್ಸಿನ್‌ಗೆ ಇನ್ನೂ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ದೊರೆ​ತಿಲ್ಲ. ಹೀಗಾಗಿ ಬಹು​ತೇಕ ವಿದೇ​ಶ​ಗಳು ಕೋವ್ಯಾ​ಕ್ಸಿನ್‌ ಲಸಿಕೆ ಪಡೆ​ದ​ವ​ರಿಗೆ ತಮ್ಮ ದೇಶ​ಗ​ಳಿಗೆ ಪ್ರವೇಶ ಕಲ್ಪಿಸಿ​ದರೂ ಕೋವಿಡ್‌ ಪರೀಕ್ಷೆ ಹಾಗೂ ಕಡ್ಡಾ​ಯ ಕ್ವಾರಂಟೈನ್‌ ವಿಧಿ​ಸು​ತ್ತಿವೆ. ಶೀಘ್ರ ಕೋವ್ಯಾ​ಕ್ಸಿ​ನ್‌ಗೆ ಮನ್ನಣೆ ಲಭಿ​ಸುವ ಸಾಧ್ಯತೆ ಇದ್ದು, ಕ್ವಾರಂಟೈನ್‌, ಕೋವಿಡ್‌ ಟೆಸ್ಟ್‌ ಸಮಸ್ಯೆ ಇರು​ವು​ದಿ​ಲ್ಲ.

ಈ ದೇಶಗಳಲ್ಲಿ ಕ್ವಾರಂಟೈನ್‌ ಕಡ್ಡಾಯ

ಕತಾರ್‌, ಮೆಕ್ಸಿಕೊ, ಪನಾಮಾ, ಬರ್ಹೇನ್‌, ಬರ್ಬಡೋಸ್‌, ರ್ವಾಂಡಾ, ಬ್ರಿಟನ್‌ ದೇಶಗಳಿಗೆ ತೆರಳಿದ ನಂತರ ಕಡ್ಡಾಯವಾಗಿ 10 ದಿನ ಕ್ವಾರಂಟೈನ್‌ಗೆ ಒಳಗಾಗಬೇಕು. ಜೊತೆಗೆ ಬಹುತೇಕ ದೇಶಗಳಿಗೆ ತೆರಳುವ 72 ಗಂಟೆ ಮುಂಚಿತವಾಗಿ ಕೋವಿಡ್‌ ನೆಗೆಟಿವ್‌ ವರದಿ ಹೊಂದಿರಬೇಕು. ಕ್ವಾರಂಟೈನ್‌ ಅವಧಿ ಬಳಿಕವೂ ಕೋವಿಡ್‌ ಟೆಸ್ಟ್‌ಗೆ ಒಳಗಾಗಬೇಕು.

ಈ ದೇಶಗಳಲ್ಲಿ ಕ್ವಾರಂಟೈನ್‌ ಇಲ್ಲ

ಮಾಲ್ಡೀವ್ಸ್‌, ದಕ್ಷಿಣ ಆಫ್ರಿಕಾ, ಇಥಿಯೋಪಿಯಾ, ರಷ್ಯಾ, ವೆನಿಜುವೆಲಾ, ಮಾಲಿ, ನಿಕಾರ್ಗುವಾ, ಕೋಸ್ಟಾರಿಸಾ, ಈಜಿಪ್ಟ್‌ ದೇಶಗಳಿಗೆ ತೆರಳುವ ಭಾರತೀಯ ಪ್ರಯಾಣಕರು ಅಲ್ಲಿ ಕ್ವಾರಂಟೈನ್‌ ಆಗಬೇಕಾದ ಅಗತ್ಯ ಇಲ್ಲ. ಆದರೆ ಇವುಗಳಲ್ಲಿ ಹಲವು ರಾಷ್ಟ್ರಗಳಿಗೆ ತೆರಳಲು 72 ಗಂಟೆ ಮುಂಚಿತವಾಗಿ ಕಡ್ಡಾಯವಾಗಿ ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಬೇಕು.

Follow Us:
Download App:
  • android
  • ios