ಲಂಡನ್(ಫೆ.05): ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ಜಗತ್ತಿನಾದ್ಯಂತ ಲಸಿಕೆ ನೀಡುವ ಕಾರ್ಯ ಭರಾಟೆಯಿಂದ ಸಾಗಿರುವಾಗಲೇ ಬ್ರಿಟನ್ನಿನ ಆರೋಗ್ಯ ಇಲಾಖೆಯು ಎರಡು ವಿಭಿನ್ನ ಜಾತಿಯ ಲಸಿಕೆಯ ಡೋಸ್‌ಗಳನ್ನು ಒಬ್ಬ ವ್ಯಕ್ತಿಗೆ ನೀಡಿದರೆ ಏನಾಗುತ್ತದೆ ಎಂಬ ಬಗ್ಗೆ ಅಧ್ಯಯನ ಆರಂಭಿಸಿದೆ.

ಬ್ರಿಟನ್‌ ಸರ್ಕಾರ ಈ ಅಧ್ಯಯನಕ್ಕೆ ಸುಮಾರು 70 ಕೋಟಿ ರು. (7 ಮಿಲಿಯನ್‌ ಪೌಂಡ್‌) ಖರ್ಚು ಮಾಡುತ್ತಿದ್ದು, ಮೊದಲ ಡೋಸ್‌ಗೆ ಒಂದು ಜಾತಿಯ ಲಸಿಕೆ ಹಾಗೂ ಎರಡನೇ ಡೋಸ್‌ಗೆ ಇನ್ನೊಂದು ಜಾತಿಯ ಲಸಿಕೆಯನ್ನು ನೀಡಿದರೆ ಮನುಷ್ಯನ ಮೇಲೆ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ, ರೋಗನಿರೋಧ ಶಕ್ತಿ ಯಾವ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ ಎಂಬ ಮುಂತಾದ ಸಂಗತಿಗಳ ಬಗ್ಗೆ ಅಧ್ಯಯನ ನಡೆಯಲಿದೆ.

ಉದಾಹರಣೆಗೆ, ಒಬ್ಬ ವ್ಯಕ್ತಿಗೆ ಮೊದಲ ಡೋಸ್‌ನಲ್ಲಿ ಆಕ್ಸ್‌ಫರ್ಡ್‌ ಲಸಿಕೆ ನೀಡಿ, ನಿಗದಿತ ಅಂತರದ ಬಳಿಕ ಎರಡನೇ ಡೋಸ್‌ಗೆ ಫೈಝರ್‌ ಲಸಿಕೆ ನೀಡುವ ರೀತಿಯಲ್ಲಿ ಅಧ್ಯಯನ ನಡೆಸಲಾಗುತ್ತದೆ. ಜಗತ್ತಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಕೊರೋನಾ ಲಸಿಕೆಯ ಅಗತ್ಯವಿರುವುದರಿಂದ ವಿಭಿನ್ನ ಜಾತಿಯ ಲಸಿಕೆಯನ್ನು ಜನರಿಗೆ ನೀಡಬಹುದು ಅಂತಾದರೆ ಅದರಿಂದ ಸಾಕಷ್ಟುಅನುಕೂಲಗಳಿವೆ. ಹೀಗಾಗಿ ಈ ಅಧ್ಯಯನ ನಡೆಯುತ್ತಿದೆ.

‘ಗುರುವಾರ ಆರಂಭವಾಗಿರುವ ಈ ಅಧ್ಯಯನ ಸತತ 13 ತಿಂಗಳು ಸುಮಾರು 800 ಜನರ ಮೇಲೆ ನಡೆಯಲಿದೆ. ‘ಕೋವಿಡ್‌-19 ಹೆಟೆರೋಲೋಗಸ್‌ ಪ್ರೈಮ್‌ ಬೂಸ್ಟ್‌ ಸ್ಟಡಿ’ ಅಥವಾ ‘ಕಾಮ್‌-ಕೋವ್‌ ಸ್ಟಡಿ’ ಎಂದು ಇದನ್ನು ಕರೆಯಲಾಗುತ್ತದೆ. ಬ್ರಿಟನ್‌ನ ಆರೋಗ್ಯ ಇಲಾಖೆಯ ಜೊತೆಗೆ ಎಂಟು ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ಈ ಅಧ್ಯಯನದಲ್ಲಿ ಕೈಜೋಡಿಸಲಿವೆ’ ಎಂದು ಬ್ರಿಟನ್ನಿನ ಕೋವಿಡ್‌-19 ಲಸಿಕೆ ಹಂಚಿಕೆ ಸಚಿವ ನದೀಂ ಜಹಾವಿ ತಿಳಿಸಿದ್ದಾರೆ.