ಚೀನಾದ ವಿಜ್ಞಾನಿಗಳು 1.36 ಕಿ.ಮೀ. ದೂರದಲ್ಲಿರುವ ಸಣ್ಣ ಅಕ್ಷರಗಳನ್ನು ಓದಬಲ್ಲ ಲೇಸರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. 

ಬೀಜಿಂಗ್‌: ಸದಾ ವಿಭಿನ್ನ ಸಂಶೋಧನೆಗಳಿಂದ ಸುದ್ದಿಯಾಗುವ ಚೀನಾದಲ್ಲಿ, 1.36 ಕಿ.ಮೀ. ದೂರದಲ್ಲಿರುವ ಸಣ್ಣಸಣ್ಣ ಅಕ್ಷರಗಳನ್ನೂ ಸ್ಪಷ್ಟವಾಗಿ ನೋಡಬಹುದಾದ ಲೇಸರ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇದನ್ನು ತಯಾರಿಸಿದ್ದಾರೆ.

ಲೇಸರ್‌ ಕೆಲಸ ಹೇಗೆ?:

ಸ್ವಯಂ ಪ್ರಕಾಶಿತ ಅಲ್ಲದ ವಸ್ತುಗಳ ಮೇಲೆ 8 ಬಣ್ಣದ ಲೇಸರ್‌ ಕಿರಣಗಳನ್ನು ಬಿಡಲಾಗುವುದು. ಆ ಬೆಳಕು ಹೋಗಿ ನಿರ್ದಿಷ್ಟ ವಸ್ತುವಿಗೆ ಬಡಿದು, ಪ್ರತಿಫಲಿಸುತ್ತದೆ. ಆ ಪ್ರತಿಫಲನವನ್ನು ನೋಡಿದಾಗ, ಅದರಲ್ಲಿ 3ಎಂ.ಎಂ., ಅಂದರೆ ಪೆನ್ಸಿಲ್‌ನ ಗೆರೆ ಅಥವಾ ಅಕ್ಕಿ ಕಾಳಿಗಿಂತ ಸಣ್ಣ ಅಕ್ಷರವನ್ನೂ ಸ್ಪಷ್ಟವಾಗಿ ನೋಡಬಹುದು. ಈ ಪ್ರತಿಫಲನವನ್ನು ರೆಕಾರ್ಡ್‌ ಮಾಡಲು 2 ಟೆಲಿಸ್ಕೋಪುಗಳನ್ನು ಬಳಸಲಾಗುತ್ತದೆ.

ವಿಜ್ಞಾನಿಗಳು ಈ ಲೇಸರ್‌ ತಂತ್ರಜ್ಞಾನವನ್ನು 1.36 ಕಿ.ಮೀ. ದೂರದಿಂದ ಪರೀಕ್ಷಿಸಿದ್ದು, ಅದು ಯಶಸ್ವಿಯಾಗಿದೆ. ಸಾಮಾನ್ಯ ಟೆಲಿಸ್ಕೋಪ್‌ನ ಸಾಮರ್ಥ್ಯಕ್ಕಿಂತ 14 ಪಟ್ಟು ದೂರದ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದು ಎಂದು ಹೇಳಿದ್ದಾರೆ.

ಈ ತಂತ್ರಜ್ಞಾನವನ್ನು ಪುರಾತತ್ತ್ವ ಶಾಸ್ತ್ರ ಅಧ್ಯಯನ, ವನ್ಯ ಜೀವಿಗಳ ಮೇಲೆ ಕಣ್ಗಾವಲು, ಖಗೋಳಶಾಸ್ತ್ರ, ಪರಿಸರ ವಿಜ್ಞಾನ ಸೇರಿ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗಬಹುದು.

ಆದರೆ ಇದಿನ್ನೂ ಪೂರ್ಣವಾಗಿ ಅಭಿವೃದ್ಧಿಯಾಗಿಲ್ಲ. ಲೇಸರ್‌ ಬೆಳಕು ಹರಿಸಬೇಕಾದ್ದರಿಂದ ಗೌಪ್ಯತೆಗೆ ಧಕ್ಕೆಯಾಗುವ ಕಾರಣ, ಗೂಢಚಾರಿಕೆಗೆ ಬಳಸಲು ಸದ್ಯಕ್ಕೆ ಸಾಧ್ಯವಿಲ್ಲ. ಮಂಜು, ಮಳೆಯಂತಹ ಪರಿಸ್ಥಿತಿಯಲ್ಲೂ ಇದು ಕೆಲಸ ಮಾಡಬಲ್ಲದು ಎನ್ನಲಾಗಿದೆ.