Brazilian Hulk: ಇಂಜೆಕ್ಶನ್ ಬಳಸಿ ಬೈಸೆಪ್ಸ್ ಬೆಳೆಸಿದ್ದ ಬಾಡಿ ಬಿಲ್ಡರ್ ಸಾವು
Brazilian Hulk Segato: ವೈದ್ಯರ ನಿರಾಕರಣೆಯ ಹೊರತಾಗಿಯೂ ಬಾಡಿಬಿಲ್ಡರ್ ಹಲವಾರು ಬಾರಿ ಇಂಜೆಕ್ಟ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಬ್ರೆಝಿಲ್ (ಆ. 10): ಬಾಡಿಬಿಲ್ಡರ್‌ಗಳು ತಮ್ಮ ಬೈಸೆಪ್ಸ್ ಬೆಳಸಲು ಹಲವು ಕಸರತ್ತುಗಳನ್ನು ಮಾಡುತ್ತಾರೆ. ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಕೇವಲ ಒಂದೇ ಒಂದು ಇಂಚಿನಿಂದ ಸೋಲು ಗೆಲವು ನಿರ್ಣಯವಾಗುತ್ತದೆ. ಹೀಗಾಗಿ ದೇಹದಾರ್ಢ್ಯ ಸ್ಪರ್ಧಾಳುಗಳು ಬೈಸೆಪ್ಸ್ ಬೆಳಸಲು ಪೈಪೋಟಿಗೆ ಬೀಳುತ್ತಾರೆ. ಆದರೆ ದೇಹವನ್ನು ಬೆಳೆಸಲು ಬಳಸಿದ ಔಷಧಿಗಳು ಕೆಲವೊಮ್ಮೆ ಜೀವವನ್ನೇ ತೆಗೆದು ಬಿಡುತ್ತವೆ. ಹೀಗೆ ದೊಡ್ಡ ಸ್ನಾಯುಗಳನ್ನು ಬೆಳಸುವುದಕ್ಕಾಗಿ ಎಣ್ಣೆಯನ್ನು (Oil) ಇಂಜೆಕ್ಟ್ ಮಾಡಿಕೊಂಡಿದ್ದ ಬ್ರೆಜಿಲಿಯನ್ ಬಾಡಿಬಿಲ್ಡರ್ ತಮ್ಮ 55 ನೇ ಹುಟ್ಟು ಹಬ್ಬದಂದು ನಿಧನರಾಗಿದ್ದಾರೆ. ವೈದ್ಯರ ನಿರಾಕರಣೆಯ ಹೊರತಾಗಿಯೂ ಬಾಡಿಬಿಲ್ಡರ್ ಹಲವಾರು ಬಾರಿ ಇಂಜೆಕ್ಟ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ವ್ಯಕ್ತಿಯ ಹೆಸರು ವಾಲ್ಡಿರ್ ಸೆಗಾಟೊ (Segato). ಅನೇಕ ವರ್ಷಗಳಿಂದ ಇವರು ತಮ್ಮ ದೇಹಕ್ಕೆ ಸಿಂಥೋಲ್ ಚುಚ್ಚುಮದ್ದನ್ನು ಚುಚ್ಚಿದ್ದಾರೆ. ಇದರಿಂದಾಗಿ ಅವರ ದೇಹದ ಅನೇಕ ಸ್ನಾಯುಗಳು ಊದಿಕೊಂಡಿದ್ದು ಅವರ ಚರ್ಮವು ನೇತಾಡಲು ಪ್ರಾರಂಭಿಸಿತ್ತು. ಇದು ಬೈಸೆಪ್ಸ್, ಬೆನ್ನು ಸ್ನಾಯುಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿತ್ತು. ಹೀಗಾಗಿ ಅವರ ದೇಹ ನೋಡಲು ಬಹಳ ವಿಚಿತ್ರವಾಗಿ ಕಾಣುತ್ತಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಬ್ರೇಝಿಲಿಯನ್ ಹಲ್ಕ್ ಎಂದು ಖ್ಯಾತಿ ಪಡೆದಿದ್ದ ಬಾಡಿ ಬಿಲ್ಡರ್: ಸೆಗಾಟೊ ಅವರು ತಮ್ಮ ಹಳೆಯ ಸಂದರ್ಶನದಲ್ಲಿ ಅರ್ನಾಲ್ಡ್ ಶ್ವಾಜೆನೆಗ್ಗರ್ (Arnold Schwarzenegger) ಅವರನ್ನು ತುಂಬಾ ಇಷ್ಟಪಡುತ್ತೆನೆ ಎಂದು ಹೇಳಿದ್ದರು. ಅಲ್ಲದೇ ಬಾಡಿ ಬಿಲ್ಡಿಂಗ್ ಬಗ್ಗೆ ಅವರು ಅವರಿಂದ ಸ್ಫೂರ್ತಿ ಪಡೆದಿದ್ದರು.
ಸೆಗಾಟೊ ಅವರ ದೇಹವನ್ನು ನೋಡಿ ಆ ಪ್ರದೇಶದ ಜನರು ಅವರನ್ನು ಹಲ್ಕ್ ಎಂದು ಕರೆಯುತ್ತಿದ್ದರು. ಚುಚ್ಚುಮದ್ದನ್ನು ಬಳಸದಂತೆ ವೈದ್ಯರು ಮತ್ತು ಅವರ ಕುಟುಂಬವು ಅವರಿಗೆ ಸಾಕಷ್ಟು ಬಾರಿ ವಿವರಿಸಿ ಹೇಳಿದರೂ ಅವರು ಕೇಳಿರಲಿಲ್ಲ. ಇದು ಅವರ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ಈಗ ಮೃತಪಟ್ಟಿದ್ದಾರೆ.
ಹಾರ್ಟ್ ಅಟ್ಯಾಕ್ ಸೂಚನೆ ಒಂದು ತಿಂಗಳ ಮೊದ್ಲೇ ಸಿಗುತ್ತೆ !
23 ಇಂಚುಗಳಷ್ಟು ಬೆಳೆದಿತ್ತು ಬೈಸೆಪ್ಸ್: ಚುಚ್ಚುಮದ್ದನ್ನು ಬಳಸಿದ್ದರಿಂದ ಸೆಗಾಟೊ ಬೈಸೆಪ್ಸ್ 23 ಇಂಚುಗಳಷ್ಟು ಬೆಳಿದಿತ್ತು. ಅವರ ಕುಟುಂಬ ವಾಸವಿದ್ದ ಮೆನೆಯ ಹಿಂಭಾಗದಲ್ಲಿ ಸೆಗಾಟೊ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಸಾವಿಗೂ ಕೆಲ ಕಾಲ ಮುಂಚೆ ಉಸಿರಾಟದ ತೊಂದರೆ ಅನುಭವಿಸಿದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅಲ್ಲಿ ಅವರು ಸಾವನ್ನಪ್ಪಿದರು.
ಪ್ರಸಿದ್ಧರಾಗಲು ಬಯಸಿದ್ದ ಬಾಡಿ ಬಿಲ್ಡರ್: ಅವರು ನೋಡಲು ಅಷ್ಟು ಬಲಶಾಲಿಯಾಗಿರಲಿಲ್ಲ ಬದಲಿಗೆ ಅವರ ದೇಹವು ಉಬ್ಬಿತ್ತು ಎಂದು ಸೆಗಾಟೊ ಸ್ನೇಹಿತರು ಹೇಳಿದ್ದಾರೆ. ಈ ಕಾರಣದಿಂದಾಗಿ, ಅವರು ಟಿಕ್‌ಟಾಕ್‌ನಲ್ಲಿ ಬಹಳ ಪ್ರಸಿದ್ಧರಾದರು ಮತ್ತು ಇನ್ನೂ ಹೆಚ್ಚು ಪ್ರಸಿದ್ಧರಾಗಬೇಕೆಂದು ಆಶಿಸಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.
ಬಾಡಿಬಿಲ್ಡರ್ ಟಿಕ್‌ಟಾಕ್‌ನಲ್ಲಿ 1.7 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಆದರೆ ಅವರು ಕೆಲವೇ ಕೆಲವು ಸ್ನೇಹಿತರೊಂದಿಗೆ ಪ್ರತ್ಯೇಕ ಜೀವನವನ್ನು ನಡೆಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಡಿ ಬಿಲ್ಡ್ ಮಾಡಲು ಹೆಚ್ಚು ಪ್ರೊಟೀನ್ ಸೇವಿಸೋರು ಇದನ್ನ ಓದಿ..
ಇನ್ನು ವೈದ್ಯರು ಇಂತಹ ಔಷಧಿಗಳನ್ನು ತೆಗೆದುಕೊಳ್ಳುವಂತೆ ಯಾವತ್ತೂ ಶಿಫಾರಸು ಮಾಡುವುದಿಲ್ಲ. ಇಂತಹ ಚುಚ್ಚುಮದ್ದು ಮತ್ತು ಔಷಧಿಗಳ ಸೇವನೆಯು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ಮನುಷ್ಯನನ್ನು ಸಹ ಕೊಲ್ಲಬಹುದು. ಹೀಗಾಗಿ ಇಂಥಹ ಔಷಧಿಗಳನ್ನು ಸೇವಿಸುವ ಮುನ್ನ ಎಚ್ಚರ ಅಗತ್ಯ.