ನವದೆಹಲಿ (ಮಾ. 01): ಅಂಟಾಕ್ರ್ಟಿಕಾ ಎಂದಾಕ್ಷಣ ಶುಭ್ರ ಶ್ವೇತವರ್ಣದ ಮಂಜುಗಡ್ಡೆ ಆವರಿಸಿದ ಖಂಡ ಕಣ್ಣ ಮುಂದೆ ಬರುತ್ತದೆ. ಆದರೆ ಇದೀಗ ಅದೇ ಅಂಟಾಕ್ರ್ಟಿಕಾ ರಕ್ತಸಿಕ್ತವಾದಂತೆ ಕಂಡುಬರುತ್ತಿದೆ.

ಅಚ್ಚರಿಯಾದರೂ ಇದು ನಿಜ. ಭೂಮಿಯಲ್ಲೇ ಅತಿ ಹೆಚ್ಚು ಚಳಿ ಹೊಂದಿರುವ ಖಂಡ ಎಂದು ಖ್ಯಾತಿ ಪಡೆದಿರುವ ಅಂಟಾಕ್ರ್ಟಿಕಾದಲ್ಲಿನ ಮಂಜುಗಡ್ಡೆ ಏಕಾಏಕಿ ರಕ್ತ ಕೆಂಪು ಬಣ್ಣಕ್ಕೆ ತಿರುಗಿದೆ. ಇದು ಅಚ್ಚರಿ ಹಾಗೂ ಆತಂಕಕ್ಕೆ ಕಾರಣವಾಗಿದೆ. ಅಂಟಾಕ್ರ್ಟಿಕಾದಲ್ಲಿ ಉಕ್ರೇನ್‌ ದೇಶವು ಸಂಶೋಧನಾ ನೆಲೆ ಹೊಂದಿದೆ. ಅದರಲ್ಲಿರುವ ಸಂಶೋಧಕರು ಈ ವಿದ್ಯಮಾನದ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾರೆ.

19 ವರ್ಷಗಳ ಸಂಘರ್ಷಕ್ಕೆ ತೆರೆ; ಅಮೆರಿಕ, ತಾಲಿಬಾನ್‌ ದೋಸ್ತಿ!

ಶುಭ್ರ ಬಿಳಿ ಬಣ್ಣದಿಂದ ಕಾಣುತ್ತಿದ್ದ ಅಂಟಾಕ್ರ್ಟಿಕಾ ರಕ್ತದ ರೀತಿಯ ಕೆಂಪು ಬಣ್ಣದ ರೂಪ ಪಡೆಯಲು ‘ಕ್ಲಮಿಡೋಮೋನಸ್‌’ ಎಂಬ ಪಾಚಿ (ಆಲ್ಗೆ) ಕಾರಣ. ಇದು ವಿಪರೀತ ತಾಪಮಾನದಲ್ಲೂ ಜೀವಂತವಾಗಿ ಇರಬಹುದಾದ ಪಾಚಿಯಾಗಿದೆ. ಇದು ಮಾನವರಿಗೆ ವಿಷಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಪಾಚಿ ಅಂಕುರಣ ಆಗಿದ್ದರಿಂದಲೇ ಅಂಟಾಕ್ರ್ಟಿಕಾದಲ್ಲಿನ ಮಂಜುಗಡ್ಡೆ ರಕ್ತ ಕೆಂಪು ಬಣ್ಣಕ್ಕೆ ತಿರುಗಿದೆ. ಇದು ಕಲ್ಲಂಗಡಿ ಹಣ್ಣಿನ ರೀತಿಯ ವಾಸನೆ ಸೂಸುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಅಂಟಾಕ್ರ್ಟಿಕಾದಲ್ಲಿನ ಅತಿ ಥರಗುಟ್ಟುವ ಚಳಿಗಾಲದ ವೇಳೆ ಪಾಚಿ ಕಂಡುಬರುತ್ತದೆ. ಚಳಿಗಾಲ ಮುಗಿದು ಬೇಸಿಗೆ ಆರಂಭವಾದಾಗ ಅದರ ಮೇಲೆ ಸೂರ್ಯನ ಶಾಖ ಬಿದ್ದು, ಪಾಚಿಯು ಗುಲಾಬಿ ಹಾಗೂ ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಕೆಂಪು ಬಣ್ಣದಿಂದ ನೀರ್ಗಲ್ಲು ಬೇಗ ಕರಗುವ ಆತಂಕ

ಜಾಗತಿಕ ತಾಪಮಾನದಿಂದ ನೀರ್ಗಲ್ಲು ಪ್ರದೇಶಗಳು ಕರಗಲು ಆರಂಭಗೊಂಡಿವೆ. ಇದರಿಂದ ಸಮುದ್ರಕ್ಕೆ ನೀರಿನ ಹರಿವು ಹೆಚ್ಚಾಗಿ ಸಮುದ್ರ ಮಟ್ಟಏರುವ ಭೀತಿಯಿದೆ. ಇದರ ನಡುವೆಯೇ ಹಿಮವು ಬಿಳಿ ಬಣ್ಣದಿಂದ ಕೆಂಪುಬಣ್ಣಕ್ಕೆ ತಿರುಗುತ್ತಿದೆ. ಕೆಂಪು ಹಿಮವು ಬೇಗ ಕರಗುತ್ತದೆ. ಇದು ಆತಂಕಕ್ಕೆ ಕಾರಣವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

2000 ವರ್ಷ ಹಿಂದೆಯೇ ಅನುಮಾನ

ರಕ್ತ ಕೆಂಪು ಬಣ್ಣದ ಮಂಜುಗಡ್ಡೆ ಬಗ್ಗೆ 2000 ವರ್ಷದ ಹಿಂದೆಯೇ ಗ್ರೀಕ್‌ ತತ್ವಜ್ಞಾನಿ ಅರಿಸ್ಟಾಟಲ್‌ ಬರೆದಿದ್ದ. ‘ಹಿಸ್ಟರಿ ಆಫ್‌ ಅನಿಮಲ್ಸ್‌’ ಪುಸ್ತಕದಲ್ಲಿ ಅರಿಸ್ಟಾಟಲ್‌, ‘ಹಿಮದ ಆಳದಲ್ಲಿ ಕೀಟಗಳು ಪತ್ತೆಯಾಗುತ್ತವೆ. ಈ ಹಿಮವು ಕೆಂಪು ಬಣ್ಣಕ್ಕೆ ತಿರುಗಿರುತ್ತದೆ’ ಎಂದು ಪುಸ್ತಕದಲ್ಲಿ ಹೇಳಿದ್ದ.

ಅಭಿನಂದನ್‌ಗೆ ಟೀ ಮಾಡಿಕೊಟ್ಟ ಪಾಕಿಸ್ತಾನದ ಚಾಯ್‌ವಾಲ ಪತ್ತೆ

ಕೆಂಪು ಬಣ್ಣ ಏಕೆ? ಹೇಗೆ?

ಕ್ಲಮಿಡೋಮೊನಸ್‌ ಎಂಬುದು ಹಸಿರು ಪಾಚಿ. ದ್ಯುತಿ ಸಂಶ್ಲೇಷಣೆ ಕ್ರಿಯೆ (ಫೋಟೋಸಿಂಥೆಸಿಸ್‌)ಗಾಗಿ ಇದು ಕ್ಲೋರೋಪ್ಲಾಸ್ಟ್‌ ಹೊಂದಿರುತ್ತದೆ. ಪಾಚಿಯ ಚಲನೆಗೆ ಎರಡು ಅಂಗಗಳು ಇರುತ್ತವೆ. ಪಾಚಿ ಚಿಕ್ಕದಿರುವಾಗ ನೀರಿನಲ್ಲಿ ತೇಲಲು ಈ ಅಂಗಗಳು ಸಹಾಯವಾಗುತ್ತವೆ.

ವಯಸ್ಸಾಗುತ್ತಿದ್ದಂತೆ ಪ್ರಬುದ್ಧವಾಗಿ ಅವುಗಳ ಚಲನೆ ನಿಲ್ಲುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿಕೂಲ ಹವಾಮಾನದ ವಿರುದ್ಧ ಹೋರಾಡಲು ಕಠಿಣ, ಸುರಕ್ಷಾ ಕೋಶ ಹಾಗೂ ಕೆಂಪು ಬಣ್ಣದ ವರ್ಣದ್ರವ್ಯ (ಕಾರೋಟೆನಾಯ್ಡ್‌$್ಸ) ಅಭಿವೃದ್ಧಿಪಡಿಸಿಕೊಳ್ಳುತ್ತವೆ. ಮಂಜುಗಡ್ಡೆ ಕೆಂಪಗಾಗಲು ಈ ವರ್ಣದ್ರವ್ಯಗಳೇ ಕಾರಣ ಎಂಬುದು ವಿಜ್ಞಾನಿಗಳ ವಿವರಣೆ.