ಬರ್ಲಿನ್‌(ಡಿ/.23): ಬ್ರಿಟನ್‌ ಸೇರಿದಂತೆ 8 ದೇಶಗಳಲ್ಲಿ ಪತ್ತೆಯಾಗಿರುವ ಕೊರೋನಾ ವೈರಸ್ಸಿನ ಹೊಸ ತಳಿಯ ವಿರುದ್ಧ ನಮ್ಮ ಈಗಿನ ಲಸಿಕೆಯೇ ಯಶಸ್ವಿಯಾಗಿ ಕೆಲಸ ಮಾಡುತ್ತದೆ. ಒಂದು ವೇಳೆ ಈ ಲಸಿಕೆ ಕೆಲಸ ಮಾಡದಿದ್ದರೆ ಆರು ವಾರದಲ್ಲಿ ಹೊಸ ವೈರಸ್ಸಿಗೆ ಹೊಂದುವ ಲಸಿಕೆ ತಯಾರಿಸಿಕೊಡಲು ಸಾಧ್ಯವಿದೆ ಎಂದು ಜರ್ಮನಿಯ ಬಯೋಎನ್‌ಟೆಕ್‌ ಕಂಪನಿ ಹೇಳಿದೆ.

ಕೊರೋನಾಗೆ ಬಯೋಎನ್‌ಟೆಕ್‌ ಮತ್ತು ಅಮೆರಿಕದ ಫೈಝರ್‌ ಕಂಪನಿ ಸೇರಿ ಸಂಶೋಧಿಸಿರುವ ಲಸಿಕೆಯೀಗ ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಆದರೆ, ಬ್ರಿಟನ್ನಿನಲ್ಲಿ ಪತ್ತೆಯಾದ ಹೊಸ ತಳಿಯ ಕೊರೋನಾ ವೈರಸ್‌ ಎಲ್ಲೆಡೆ ಆತಂಕ ಮೂಡಿಸಿದ್ದು, ಈಗಾಗಲೇ ಬಿಡುಗಡೆಯಾಗಿರುವ ಲಸಿಕೆಗಳು ಈ ತಳಿಯ ವಿರುದ್ಧ ಕೆಲಸ ಮಾಡುತ್ತವೆಯೇ ಇಲ್ಲವೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಈ ಕುರಿತು ಸ್ಪಷ್ಟನೆ ನೀಡಿರುವ ಬಯೋಎನ್‌ಟೆಕ್‌ ಸಹ ಸಂಸ್ಥಾಪಕ ಉಗುರ್‌ ಸಹಿನ್‌, ‘ಈಗ ಕಂಡುಹಿಡಿದಿರುವ ಲಸಿಕೆಯೇ ಹೊಸ ತಳಿಯ ವಿರುದ್ಧವೂ ಕೆಲಸ ಮಾಡುತ್ತದೆ. ಅಗತ್ಯಬಿದ್ದರೆ ನಾವು ಕೂಡಲೇ ಅದಕ್ಕೆ ಹೊಂದುವ ಹೊಸ ಲಸಿಕೆಯನ್ನೂ ತಯಾರಿಸಿ ಆರು ವಾರಗಳಲ್ಲಿ ಬಿಡುಗಡೆ ಮಾಡಲು ಸಿದ್ಧರಿದ್ದೇವೆ. ಬ್ರಿಟನ್ನಿನಲ್ಲಿ ಪತ್ತೆಯಾದ ಹೊಸ ತಳಿ ಕೇವಲ ಒಂದು ರೂಪಾಂತರವಲ್ಲ, ಒಂಭತ್ತು ರೂಪಾಂತರಗಳನ್ನು ಹೊಂದಿದೆ. ನಾವು ಫೈಝರ್‌ ಜೊತೆ ಸೇರಿ ಕಂಡುಹಿಡಿದ ಲಸಿಕೆಯಲ್ಲಿ 1000ಕ್ಕೂ ಹೆಚ್ಚು ಅಮೈನೋ ಆ್ಯಸಿಡ್‌ಗಳಿವೆ. ಈಗ ಅವುಗಳಲ್ಲಿ ಕೇವಲ ಒಂಭತ್ತು ಮಾತ್ರ ಬದಲಾಗಿವೆ. ಅಂದರೆ ಶೇ.99ರಷ್ಟುಪ್ರೊಟೀನ್‌ಗಳು ಅವೇ ಇವೆ. ಹೀಗಾಗಿ ನಮ್ಮ ಲಸಿಕೆ ಹಳೆಯ ಕೊರೋನಾ ವೈರಸ್‌ ವಿರುದ್ಧ ಹೇಗೆ ಕೆಲಸ ಮಾಡುತ್ತದೆಯೋ ಹಾಗೆಯೇ ಹೊಸ ತಳಿಯ ವಿರುದ್ಧವೂ ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ.