ಭಾರತೀಯ ಟೆಕಿಗಳಿಗೆ ಬೈಡೆನ್‌ ‘ಪೌರತ್ವ’ ಬಂಪರ್‌| ಗ್ರೀನ್‌ಕಾರ್ಡ್‌ ಮೇಲಿನ ದೇಶವಾರು ಮಿತಿ ರದ್ದು| ಅಮೆರಿಕ ಕಾಯಂ ವಾಸಿ ಆಗಬಯಸುವ ಟೆಕಿಗಳಿಗೆ ಭರ್ಜರಿ ಲಾಭ| ಅಧಿಕಾರ ಸ್ವೀಕಾರ ಬೆನ್ನಲ್ಲೇ ಸಂಸತ್ತಿಗೆ ಪ್ರಸ್ತಾಪ ಕಳಿಸಲು}ಮುಂದಾದ ಜೋ| ಟ್ರಂಪ್‌ ನೀತಿಯಿಂದ ಕಂಗೆಟ್ಟಿದ್ದ ಭಾರತೀಯರಿಗೆ ಸಮಾಧಾನ

ವಾಷಿಂಗ್ಟನ್‌(ಜ.21): ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ನಿರ್ಗಮಿಸಿ ‘ಜೋ ಬೈಡೆನ್‌ ಯುಗ’ ಆರಂಭ ಆಗುತ್ತಿದ್ದಂತೆಯೇ ಅಮೆರಿಕಕ್ಕೆ ಉದ್ಯೋಗಕ್ಕೆಂದು ತೆರಳಲು ಇಚ್ಛಿಸುವ ಭಾರತೀಯರಿಗೆ ಶೀಘ್ರ ಶುಭ ಸಮಾಚಾರ ಲಭಿಸುವ ನಿರೀಕ್ಷೆಗಳು ಗರಿಗೆದರಿವೆ. ಉದ್ಯೋಗ ಆಧರಿತ ಗ್ರೀನ್‌ ಕಾರ್ಡ್‌ (ಕಾಯಂ ಪೌರತ್ವ) ವಿತರಣೆಯ ಮೇಲೆ ಇದ್ದ ದೇಶವಾರು ಮಿತಿಯನ್ನು ಬೈಡೆನ್‌ ಸರ್ಕಾರ ರದ್ದುಗೊಳಿಸಲು ಉದ್ದೇಶಿಸಿದೆ. ಈ ಕುರಿತ ಪ್ರಸ್ತಾಪವನ್ನು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬೈಡೆನ್‌ ಅವರು ಸಂಸತ್ತಿಗೆ ಕಳುಹಿಸಿಕೊಡಲು ಮುಂದಾಗಿದ್ದಾರೆ.

ಹೊಸ ‘ಅಮೆರಿಕ ಪೌರತ್ವ ಕಾಯ್ದೆ-2021’ ಸಂಸತ್ತಿನಲ್ಲಿ ಅಂಗೀಕಾರಗೊಂಡರೆ ಅಮೆರಿಕಕ್ಕೆ ನೌಕರಿಗೆಂದು ತೆರಳಿ ಅಲ್ಲಿನ ಕಾಯಂ ನಿವಾಸಿ ಆಗಲು ಬಯಸುವ ಹಾಗೂ ಈಗಾಗಲೇ ಅಮೆರಿಕದಲ್ಲಿ ನೆಲೆಸಿ ಗ್ರೀನ್‌ ಕಾರ್ಡ್‌ ಪಡೆಯಲು ಯತ್ನಿಸುತ್ತಿರುವ ಸಾವಿರಾರು ಭಾರತೀಯ ಸಾಫ್ಟ್‌ವೇರ್‌ ತಂತ್ರಜ್ಞರಿಗೆ ಲಾಭವಾಗಲಿದೆ.

ಈ ಕುರಿತು ಬುಧವಾರ ಮಾಹಿತಿ ನೀಡಿದ ಶ್ವೇತಭವನದ ನಿಯೋಜಿತ ಅಧಿಕಾರಿಯೊಬ್ಬರು, ‘ಬೇರೆ ದೇಶಗಳಲ್ಲಿ ತೊಂದರೆಗೆ ಒಳಗಾಗಿರುವವರಿಗೆ ಅಮೆರಿಕದಲ್ಲಿ ಆಶ್ರಯ ಒದಗಿಸಿ ಪೌರತ್ವ ನೀಡುವ ಹಾಗೂ ವಲಸೆ ಸಮಸ್ಯೆ ನಿವಾರಿಸುವ ಉದ್ದೇಶವನ್ನು ಹೊಸ ಸರ್ಕಾರ ಹೊಂದಿದೆ. ಇದಲ್ಲದೆ, ವೀಸಾಗಳ ಮೇಲಿನ ದೇಶವಾರು ಮಿತಿ ತೆಗೆದು ಹಾಕುವುದು, ಶೀಘ್ರ ವೀಸಾ ವಿಲೇವಾರಿ ಮಾಡುವುದು ಹಾಗೂ ಬಳಕೆ ಆಗದೇ ಉಳಿದ ವೀಸಾಗಳನ್ನು ಬಳಸಿಕೊಂಡು ಉದ್ಯೋಗ ಆಧರಿತ ವೀಸಾ ಬ್ಯಾಕ್‌ಲಾಗ್‌ ನಿವಾರಿಸುವ ಇರಾದೆ ಇದೆ’ ಎಂದರು.

ಸಮಸ್ಯೆ ಏನು?:

ಅಮೆರಿಕದಲ್ಲೇ ಉದ್ಯೋಗ ಮಾಡುತ್ತ ಶಾಶ್ವತವಾಗಿ ನೆಲೆಸಲು ಇಚ್ಛಿಸುವವರಿಗೆ ಗ್ರೀನ್‌ಕಾರ್ಡ್‌ ನೀಡಲಾಗುತ್ತದೆ. ಆದರೆ ವಾರ್ಷಿಕ ಗ್ರೀನ್‌ ಕಾರ್ಡ್‌ ವಿತರಣೆಗೆ ಪ್ರತಿ ದೇಶಕ್ಕೆ ಟ್ರಂಪ್‌ ಸರ್ಕಾರ ಶೇ.7ರ ಮಿತಿ ಹೇರಿತ್ತು. ಅಂದರೆ ಒಟ್ಟು ವಿತರಣೆಯಲ್ಲಿ ಒಂದು ದೇಶದ ಮಿತಿ ಶೇ.7 ದಾಟುವಂತಿರಲಿಲ್ಲ. ಇದರಿಂದಾಗಿ ಅಮೆರಿಕದಲ್ಲಿ ಉದ್ಯೋಗ ಅರಸಿ ಎಚ್‌-1ಬಿ ವೀಸಾ ಮೇಲೆ ತೆರಳಿ, ಅಲ್ಲಿಯೇ ಕಾಯಂ ಆಗಿ ನೆಲೆಸಲು ಉದ್ದೇಶಿಸಿದ್ದ ಸಾವಿರಾರು ಭಾರತೀಯ ಸಾಫ್ಟ್‌ವೇರ್‌ ತಂತ್ರಜ್ಞರಿಗೆ ಗ್ರೀನ್‌ಕಾರ್ಡ್‌ ಲಭಿಸದೇ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದರು.

ಸಮಸ್ಯೆಗೆ ಬೈಡೆನ್‌ ಪರಿಹಾರ:

ಗ್ರೀನ್‌ಕಾರ್ಡ್‌ ಸಮಸ್ಯೆ ಮನಗಂಡಿರುವ ಜೋ ಬೈಡೆನ್‌, ದೇಶವಾರು ಉದ್ಯೋಗ ಆಧರಿತ ಗ್ರೀನ್‌ಕಾರ್ಡ್‌ ಮಿತಿ ತೆಗೆದು ಹಾಕುವ ಉದ್ದೇಶ ಹೊಂದಿದ್ದು, ಹೊಸ ಕಾಯ್ದೆ ಜಾರಿಗೆ ತರುತ್ತಿದ್ದಾರೆ. ವೀಸಾ ಪಡೆದ 3 ವರ್ಷ ನಂತರ ಅಮೆರಿಕ ಪೌರತ್ವಕ್ಕೆ ಅರ್ಜಿ ಹಾಕಲು ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಅರ್ಹತಾ ಮಾನದಂಡಕ್ಕೆ ಒಳಪಡದಿದ್ದಲ್ಲಿ 5 ವರ್ಷ ಕಾಲ ಅವರಿಗೆ ‘ಮಧ್ಯಂತರ ಸ್ಥಾನಮಾನ’ ನೀಡಿ, ನಂತರದ 3 ವರ್ಷದ ಒಳಗೆ ಅಮೆರಿಕ ಪೌರತ್ವ ಪಡೆಯಲು ಅನುವು ಮಾಡಿಕೊಡಲಾಗುತ್ತದೆ.

ಇದೇ ವೇಳೆ, ಎಚ್‌-1ಬಿ ವೀಸಾ ಪಡೆದವರ ಅವಲಂಬಿತರು ಕೂಡ ಅಮೆರಿಕದಲ್ಲಿ ಕೆಲಸ ಮಾಡಲು ಹೊಸ ಕಾಯ್ದೆಯಡಿ ಅವಕಾಶ ಲಭಿಸಲಿದೆ. ಜತೆಗೆ ಧರ್ಮಾಧರಿತ ತಾರತಮ್ಯವನ್ನೂ ನಿವಾರಿಸಲಾಗುತ್ತದೆ.

ಕಳೆದ ನವೆಂಬರ್‌ನಲ್ಲಷ್ಟೇ ಚುನಾವಣಾ ಪ್ರಚಾರದ ವೇಳೆ ಬೈಡೆನ್‌ ಅವರು ಅಮೆರಿಕ ವೀಸಾ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಮಾಡುವ ಭರವಸೆ ನೀಡಿದ್ದರು.

ಹೊಸ ನೀತಿ ಏನು?

- ಗ್ರೀನ್‌ ಕಾರ್ಡ್‌ ವಿತರಣೆ ಕುರಿತ 7% ಮಿತಿ ರದ್ದು

- ವೀಸಾ ಪಡೆದ 3 ವರ್ಷ ಬಳಿಕ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು

- ಅರ್ಹತೆಗೆ ಒಳಪಡದಿದ್ದರೆ 5 ವರ್ಷಗಳ ಮಧ್ಯಂತರ ಸ್ಥಾನಮಾನ

- ನಂತರದ 3 ವರ್ಷದಲ್ಲಿ ಪೌರತ್ವ ಪಡೆಯುವ ಅವಕಾಶ