* ಭದ್ರತಾ ದೃಷ್ಟಿಯಿಂದ ಸೇನೆ ಹಿಂಪಡೆಯಲು ಬೈಡೆನ್‌ ನಿರ್ಧಾರ* ಆ.31ರೊಳ​ಗೇ ಆಫ್ಘನ್‌ನಿಂದ ಅಮೆ​ರಿಕ ಸೇನೆ ವಾಪಸ್‌

ವಾಷಿಂಗ್ಟನ್‌(ಆ.25): ಅಷ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಬಗೆಹರಿಯದ ಹೊರತಾಗಿಯೂ ಸೇನೆಯನ್ನು ಆ.31ರ ಒಳಗಾಗಿ ವಾಪಸ್‌ ಕರೆಸಿಕೊಳ್ಳುವ ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮಂಗಳವಾರ ಪುನರುಚ್ಚರಿಸಿದ್ದಾರೆ.

‘ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ಸೇನೆಯ ವಾಪಸಾತಿಗೆ ಮತ್ತಷ್ಟುಸಮಯಾವಕಾಶ ನೀಡಲಾಗದು. ಈ ಗಡುವಿನ ಒಳಗೆ ಸೇನೆಯನ್ನು ವಾಪಸ್‌ ಕರೆಸಿಕೊಳ್ಳದಿದ್ದರೆ ಅದರ ಪರಿಣಾಮ ಭೀಕರವಾಗಿರಲಿದೆ’ ಎಂದು ತಾಲಿಬಾನ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ ಬೈಡೆನ್‌ ಅವರ ಹೇಳಿಕೆ ಹೊರಬಿದ್ದಿದೆ.

ಸುರಕ್ಷತೆಯ ದೃಷ್ಟಿಯಿಂದ ಗಡುವಿನ ಒಳಗಾಗಿ ಸೇನೆಯನ್ನು ಹಿಂಪಡೆಯುವಂತೆ ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯಕಚೇರಿ ಪೆಂಟಗನ್‌ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ತಂಡದ ಜೊತೆ ಸಮಾಲೋಚನೆ ನಡೆಸಿದ ಬೈಡೆನ್‌ ಮಂಗಳವಾರ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದೇ ವೇಳೆ, ಅಷ್ಘಾನಿಸ್ತಾನದಲ್ಲಿ ಇನ್ನಷ್ಟುದಿನ ಸೇನೆಯನ್ನು ಉಳಿಸಿಕೊಳ್ಳುವಂತೆ ಜಿ-7 ರಾಷ್ಟ್ರಗಳು ಇಟ್ಟಿದ್ದ ಬೇಡಿಕೆಯನ್ನು ಬೈಡೆನ್‌ ತಳ್ಳಿಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಅಷ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂಪಡೆಯಲು ಇನ್ನು ಕೇವಲ ಒಂದು ವಾರದ ಅವಧಿ ಮಾತ್ರವೇ ಉಳಿದಿದೆ. ಆದರೆ, ಅಷ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಸಾವಿರಾರು ಜನರನ್ನು ತಾಲಿಬಾನ್‌ ಉಗ್ರರ ಕಪಿಮುಷ್ಟಿಯಿಂದ ತೆರವುಗೊಳಿಸಬೇಕಿದೆ. ಹೀಗಾಗಿ ಅಮೆರಿಕದ ನಿರ್ಧಾರ ತೆರವು ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.