Asianet Suvarna News Asianet Suvarna News

ಭಾರತಕ್ಕೆ ಭದ್ರತಾ ಮಂಡಳಿ, ಎನ್‌ಎಸ್‌ಜಿ ಸದಸ್ಯತ್ವಕ್ಕೆ ಅಮೆರಿಕದ ಬೆಂಬಲ!

* ಮೋದಿ ಜತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಅಧ್ಯಕ್ಷ ಬೈಡೆನ್‌ ಭರವಸೆ

* ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿಗೆ ಸಿಕ್ಕ ಅತಿದೊಡ್ಡ ಯಶಸ್ಸು

* ಭಾರತಕ್ಕೆ ಭದ್ರತಾ ಮಂಡಳಿ, ಎನ್‌ಎಸ್‌ಜಿ ಸದಸ್ಯತ್ವಕ್ಕೆ ಅಮೆರಿಕದ ಬೆಂಬಲ

Biden reiterates support for India's permanent seat in UNSC entry into NSG pod
Author
Bangalore, First Published Sep 26, 2021, 10:12 AM IST

ವಾಷಿಂಗ್ಟನ್‌(ಸೆ.26): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(United Nations Security Council) ಕಾಯಂ ಸದಸ್ಯತ್ವ ಮತ್ತು ಎನ್‌ಎಸ್‌ಜಿಯಲ್ಲಿ(NSG) ಭಾರತಕ್ಕೆ ಸ್ಥಾನ ಕಲ್ಪಿಸುವ ವಿಷಯವನ್ನು ಬೆಂಬಲಿಸುವುದಾಗಿ ಅಮೆರಿಕದ ಘೋಷಿಸಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಅಮೆರಿಕ ಭೇಟಿಗೆ ಅತ್ಯಂತ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.

ಜೋ ಬೈಡೆನ್‌(Joe Biden) ಅಧ್ಯಕ್ಷರಾದ ಬಳಿಕ ಮೊದಲ ಬಾರಿ ಅವರನ್ನು ಭೇಟಿಯಾಗಿ ಶನಿವಾರ ಇಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ(Narendra Modi) ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯ ರಾಷ್ಟ್ರಗಳ ಸಂಖ್ಯೆ ವಿಸ್ತರಣೆ, ಎನ್‌ಎಸ್‌ಜಿ(NSG), ಕೊರೋನಾ ಬಿಕ್ಕಟ್ಟು ಸೇರಿದಂತೆ ಹಲವು ಜಾಗತಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಮಾತುಕತೆ ಬಳಿಕ ಉಭಯ ದೇಶಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಈ ವೇಳೆ ಹಾಲಿ ಸದಸ್ಯ ದೇಶಗಳ ಕೂಟವಾಗಿರುವ ಭದ್ರತಾ ಮಂಡಳಿಯನ್ನು ವಿಸ್ತರಿಸುವ ಮತ್ತು ಅದರಲ್ಲಿ ಭಾರತ ಸೇರಿದಂತೆ ಅರ್ಹ ದೇಶಗಳಿಗೆ ಸ್ಥಾನ ಕಲ್ಪಿಸುವ ವಿಷಯವನ್ನು ಅಮೆರಿಕ ಬೆಂಬಲಿಸಲಿದೆ ಎಂದು ಬೈಡೆನ್‌(Joe Biden) ಅವ​ರು ಮೋದಿಗೆ ಭರವಸೆ ನೀಡಿದರು. ಅಲ್ಲದೆ ಕಳೆದ ಆಗಸ್ಟ್‌ನಲ್ಲಿ ಭಾರತ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ವೇಳೆ ವಹಿಸಿದ ಗಮನಾರ್ಹ ಪಾತ್ರದ ಬಗ್ಗೆಯೂ ಬೈಡೆನ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಲಿ ಭದ್ರತಾ ಮಂಡಳಿಯಲ್ಲಿ ಅಮೆರಿಕ, ರಷ್ಯಾ(Russia), ಚೀನಾ(China), ಫ್ರಾನ್ಸ್‌(France) ಮತ್ತು ಬ್ರಿಟನ್‌(Britain) ಕಾಯಂ ಸದಸ್ಯ ದೇಶಗಳಾಗಿವೆ. ಈ 5 ದೇಶಗಳು ಭದ್ರತಾ ಮಂಡಳಿ ಕೈಗೊಳ್ಳುವ ಯಾವುದೇ ವಿಷಯವನ್ನು ವಿಟೋ ಮೂಲಕ ತಡೆಯುವ ಅಧಿಕಾರ ಹೊಂದಿವೆ. ಕಾಯಂ ರಾಷ್ಟ್ರಗಳ ಸಂಖ್ಯೆ ವಿಸ್ತರಿಸುವ ಮತ್ತು ಅದಕ್ಕೆ ಭಾರತ ಸೇರ್ಪಡೆ ವಿಷಯವನ್ನು ಚೀನಾ ವಿರೋಧಿಸುತ್ತಿದೆ.

ಎನ್‌ಎಸ್‌ಜಿಗೂ ಬೆಂಬಲ:

ಇದೆ ವೇಳೆ ಎನ್‌ಎಸ್‌ಜಿ (ಪರಮಾಣು ಪೂರೈಕೆದಾರ ದೇಶಗಳ ಗುಂಪು) ಗುಂಪಿನಲ್ಲಿ ಭಾರತವನ್ನೂ ಸದಸ್ಯ ದೇಶವಾಗಿ ಸೇರಿಸಿಕೊಳ್ಳುವ ಪ್ರಸ್ತಾಪವನ್ನೂ ಬೆಂಬಲಿಸುವುದಾಗಿ ಬೈಡೆನ್‌, ಮೋದಿಗೆ ಭರವಸೆ ನೀಡಿದರು. ನಿಶ್ಶಸ್ತಿ್ರಕರಣ ಒಪ್ಪಂದಕ್ಕೆ ಸಹಿ ಹಾಕದ ಹಿನ್ನೆಲೆಯಲ್ಲಿ ಭಾರತವನ್ನು 48 ದೇಶಗಳ ಸಂಘಟನೆಯಾದ ಎನ್‌ಎಸ್‌ಜಿಗೆ ಸೇರಿಸಕೊಳ್ಳಬಾರದು ಎಂದು ಚೀನಾ ಅಡ್ಡಗಾಲು ಹಾಕುತ್ತಿದೆ. ಇದೇ ಕಾರಣಕ್ಕಾಗಿಯೇ 2016ರಲ್ಲಿ ಭಾರತ ಎನ್‌ಎಸ್‌ಜಿ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿದಾಗ, ಪಾಕ್‌ನಿಂದಲೂ ಚೀನಾ, ಇದರ ವಿರುದ್ಧ ಅರ್ಜಿ ಹಾಕಿಸಿತ್ತು.

Follow Us:
Download App:
  • android
  • ios