ವಾಷಿಂಗ್ಟನ್‌ (ಏ.02):  ಎಚ್‌1ಬಿ ವೀಸಾ ಸೇರಿದಂತೆ ವಿದೇಶಿ ವೃತ್ತಿಪರರಿಗೆ ಅಮೆರಿಕ ಸರ್ಕಾರ ನೀಡುವ ವಿವಿಧ ನೌಕರಿ ವೀಸಾಗಳನ್ನು ನಿಷೇಧಿಸಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊರಡಿಸಿದ್ದ ಆದೇಶ ಮಾ.31ಕ್ಕೆ ಅಂತ್ಯಗೊಂಡಿದೆ. ಅದನ್ನು ಹಾಲಿ ಅಧ್ಯಕ್ಷ ಜೋ ಬೈಡೆನ್‌ ಮುಂದುವರೆಸದ ಕಾರಣ ಇನ್ನುಮುಂದೆ ವರ್ಷದ ಹಿಂದಿನಂತೆ ಭಾರತೀಯ ಸಾಫ್ಟ್‌ವೇರ್‌ ಎಂಜಿನಿಯರ್‌ಗಳೂ ಸೇರಿದಂತೆ ಅಮೆರಿಕದಲ್ಲಿ ಕೆಲಸ ಮಾಡಲಿಚ್ಛಿಸುವ ಸಾವಿರಾರು ವಿದೇಶೀಯರಿಗೆ ಅಮೆರಿಕದ ನೌಕರಿ ವೀಸಾಗಳು ಸಿಗಲಿವೆ.

ಕಳೆದ ವರ್ಷ ಕೊರೋನಾ ಲಾಕ್‌ಡೌನ್‌ ಜಾರಿಯಲ್ಲಿದ್ದಾಗ ಅಮೆರಿಕನ್ನರಿಗೇ ಅಮೆರಿಕದ ಉದ್ಯೋಗಗಳು ಹೆಚ್ಚು ಸಿಗಬೇಕು ಎಂಬ ಕಾರಣಕ್ಕೆ 2020ರ ಡಿ.31ರವರೆಗೆ ಎಚ್‌1ಬಿ ಹಾಗೂ ಇನ್ನಿತರ ವರ್ಕ್ ವೀಸಾ ವಿತರಣೆಯನ್ನು ಟ್ರಂಪ್‌ ನಿಷೇಧಿಸಿದ್ದರು. ನಂತರ ಅದನ್ನು 2021ರ ಮಾ.31ರವರೆಗೆ ಮುಂದುವರೆಸಿದ್ದರು. ಈಗ ಅಧ್ಯಕ್ಷ ಜೋ ಬೈಡೆನ್‌ ಆ ಆದೇಶವನ್ನು ಮುಂದುವರೆಸಿಲ್ಲ. ಹೀಗಾಗಿ ಅದು ರದ್ದಾದಂತಾಗಿದೆ. ಆದರೆ, ಎಚ್‌1ಬಿ ವೀಸಾ ವಿತರಣೆ ಆರಂಭಿಸುವಂತೆ ಹೊಸ ಆದೇಶವನ್ನೇನೂ ಬೈಡೆನ್‌ ಹೊರಡಿಸಿಲ್ಲ.

ಸೊಸೆ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡ ಡೋನಾಲ್ಡ್ ಟ್ರಂಪ್‌ಗೆ ಮತ್ತೆ ನಿಷೇಧ!

ಟ್ರಂಪ್‌ ಎಚ್‌1ಬಿ ವೀಸಾ ನಿಷೇಧಿಸಿದಾಗ ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಡೆಮಾಕ್ರೆಟಿಕ್‌ ಪಕ್ಷದವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಿರುವುದರಿಂದ ವಿದೇಶಿ ವಲಸಿಗರಿಗೆ ಕಡಿವಾಣ ಹಾಕಬೇಕೆಂದು ರಿಪಬ್ಲಿಕನ್‌ ಪಕ್ಷ ವಾದಿಸಿತ್ತು. ಈಗಲೂ ರಿಪಬ್ಲಿಕನ್‌ ಪಕ್ಷದ ಸಂಸದರು ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಶೇ.6.2ರಷ್ಟಿರುವುದರಿಂದ ವರ್ಕ್ ವೀಸಾ ನಿಷೇಧ ಮುಂದುವರೆಸಬೇಕೆಂದು ಬೈಡೆನ್‌ ಅವರನ್ನು ಒತ್ತಾಯಿಸಿದ್ದಾರೆ.