ಬೀಜಿಂಗ್‌(ಜೂ.16): ರಾಜಧಾನಿ ಬೀಜಿಂಗ್‌ನಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಹೊಸ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಹೊಸದಾಗಿ ಕೊರೋನಾ ವೈರಸ್‌ ಪತ್ತೆಯಾಗಿರುವ ಇಲ್ಲಿನ ಕ್ಸಿನ್‌ಫಾಡಿ ಮಾರುಕಟ್ಟೆಗೆ ಭೇಟಿಕೊಟ್ಟವರಿಗೆಲ್ಲಾ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಸೋಮವಾರ ಒಂದೇ ದಿನ ಬೀಜಿಂಗ್‌ನಲ್ಲಿ 42 ಸೇರಿ ದೇಶಾದ್ಯಂತ 49 ಹೊಸ ಕೊರೋನಾ ಪ್ರಕರಣ ದೃಢಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಮೇ 30ರಿಂದ ಬೀಜಿಂಗ್‌ನಲ್ಲಿರುವ ಕ್ಸಿನ್‌ಫಾಡಿ ಸಗಟು ಮಾರುಕಟ್ಟೆಗೆ ಭೇಟಿ ನೀಡಿದ ಪ್ರತಿಯೊಬ್ಬರನ್ನೂ ಹುಡುಕಿ ಅವರಿಗೆ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಾರುಕಟ್ಟೆಗೆ ಭೇಟಿ ನೀಡಿದ್ದವರ ಪೈಕಿ ಈಗಾಗಲೇ 29,386 ಮಂದಿಯನ್ನು ಪತ್ತೆ ಹಚ್ಚಿ, ಅವರ ನ್ಯೂಕ್ಲಿಕ್‌ ಆ್ಯಸಿಡ್‌ ಟೆಸ್ಟ್‌ ಮಾಡಲಾಗಿದೆ. ಈ ಪೈಕಿ 12,973 ಮಂದಿಯ ಪರೀಕ್ಷಾ ಮಾದರಿಗಳು ನೆಗೆಟಿವ್‌ ಆಗಿದ್ದು, ಉಳಿದವರ ಪರೀಕ್ಷಾ ವರದಿ ಇನ್ನಷ್ಟೇ ಕೈಸೇರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಒಂದೇ ದಿನದಲ್ಲಿ ಪತ್ತೆಯಾಗಿರುವ 49 ಸೋಂಕಿತರ ಪೈಕಿ 18 ಮಂದಿಯಲ್ಲಿ ಸೋಂಕಿನ ಲಕ್ಷಣಗಳೇ ಇರಲಿಲ್ಲ. ಇಂಥವರಿಂದ ಸೋಂಕು ಹಲವರಿಗೆ ಹಬ್ಬುವ ಅಪಾಯವಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.