ಬೀಜಿಂಗ್(ಏ.13): ಒಂದೆಡೆ ಚೀನಾದ ವುಹಾನ್‌ನಿಂದ ಹಬ್ಬಿದ ಮಾರಕ ಕೊರೋನಾ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಆದರೆ ಅತ್ತ ಚೀನಾದ ವುಹಾನ್‌ನಲ್ಲಿ ಕೊರೋನಾ ಮಣಿಸಿದ್ದಕ್ಕಾಗಿ ಸಂಭ್ರಮಾಚರಣೆ ನಡೆದಿದೆ. ಈಗಾಗಲೇ ಚೀನಾ ಕೊರೋನಾ ಸಂಬಂಧಿತ ಅನೇಕ ವಿಚಾರಗಳನ್ನು ಜಗತ್ತಿಗೆ ತಿಳಿಯದಂತೆ ಮುಚ್ಚಿಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಿರುವಾಗ ಇಲ್ಲಿನ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಕೊರೋನಾ ವೈರಸ್‌ ಹುಟ್ಟಿಕೊಂಡಿದ್ದು ಹೇಗೆ? ಅಥವಾ ಇದಕ್ಕೆ ಸಂಬಂಧಿಸಿದಂತೆ ಇನ್ನಿತರ ಅಧ್ಯಯನ ನಡೆಸುವುದಕ್ಕೂ ಬ್ರೇಕ್ ಹಾಕಿದೆ.

ವುಹಾನ್ ಲ್ಯಾಬ್‌ನಿಂದಲೇ ಬಂತು ಕೊರೋನಾ, ವಿಜ್ಞಾನಿಗಳ ಸಂಶೋದನಾ ವರದಿಗೆ ಬೆತ್ತಲಾಯ್ತು ಚೀನಾ!

ಹೌದು ಇನ್ಮುಂದೆ ಚೀನಾದಲಲ್ಲಿ ಕೊರೋನಾ ಸಂಬಂಧಿತ ಯಾವುದೇ ಅಧ್ಯಯನ ನಡೆಸುವುದಿದ್ದರೂ ಸರ್ಕಾರದ ಅನುಮತಿ ಪಡೆಯಲೇಬೇಕು. ಅಲ್ಲದೇ ಅಧ್ಯನ ನಡೆಸಿದ ಬಳಿಕ ಆ ವರದಿಯನ್ನು ಬಹಿರಂಗಪಡಿಸುವ ಮುನ್ನ ಸರ್ಕಾರದ ಗಮನಕ್ಕೆ ತಂದು ಗ್ರೀನ್ ಸಿಗ್ನಲ್ ಪಡೆಯಲೇಬೇಕು. ಈ ನಿಯಮ ಶೈಕ್ಷಣಿಕ ಕ್ಷೇತ್ರಕ್ಕೂ ಹೇರಲಾಗಿದ್ದು, ಈಗಾಗಲೇ ಅಧ್ಯಯನ ನಡೆಸಿದ್ದ ಎರಡು ವಿಶ್ವವಿದ್ಯಾನಿಲಯಗಳು ಸರ್ಕಾರದ ಆದೇಶದ ಬೆನ್ನಲ್ಲೇ ವರದಿಯನ್ನು ವೆಬ್‌ಸೈಟಿನಿಂದ ತೆಗೆದು ಹಾಕಿವೆ.

ಇನ್ನು ವಿಶ್ವದಾದ್ಯಂತ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದುಕೊಂಡಿರುವ ಕೊರೋನಾ ವೈರಸ್ ಸಂಬಂಧಿತ ಹಲವಾರು ಅಧ್ಯಯನಗಳು ಈಗಾಗಲೇ ಹೊರ ಬಿದ್ದಿದ್ದು, ಚೀನಾಗೆ ಭಾರೀ ಮುಜುಗರವುಂಟು ಮಾಡಿವೆ. ಅಲ್ಲದೇ ಈ ವೈರಸ್ ಹುಟ್ಟಿಕೊಂಡಿರುವ ಸಂಬಂಧ ಚೀನಾ ಹಾಗೂ ಅಮೆರಿಕಾ ನಡುವಣ ಹಲವಾರು ಬಾರಿ ವಾಕ್ಸಮರವೂ ನಡೆದಿದೆ. ಹೀಗಿರುವಾ ಚೀನಾ ಈ ಹೊಸ ನಿಯಮ ಹೇರಿ ಇಂತಹ ನಡೆಯನ್ನು ಹತ್ತಿಕ್ಕುವ ಯತ್ನಕ್ಕೆ  ಮುಂದಾಗಿದೆ. ಈ ಮೂಲಕ ವೈರಸ್ ತನ್ನ ರಾಷ್ಟ್ರದಲ್ಲಿ ಹುಟ್ಟಿಕೊಂಡಿದ್ದಲ್ಲ ಎಂಬುವುದನ್ನು ಸಾಬೀತುಪಡಿಸಲು ಹೊರಟಂತಿದೆ.

ಚೀನಾ ಸರ್ಕಾರದ ಈ ಆದೇಶದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಂಶೋಧಕರೊಬ್ಬರು 'ಕೊರೋನಾ ವೈರಸ್ ಚೀನಾದಿಂದ ಹಬ್ಬಿದ್ದು ಅಲ್ಲ ಎಂಬುವುದನ್ನು ಸಾಬೀತುಪಡಿಸಲು ಚೀನಾ ಸರ್ಕಾರ ಇಂತಹ ಆದೇಶ ಹೊರಡಿಸಿರಬಹುದು. ಅಲ್ಲದೇ ಮುಂದೆ ನಡೆಯುವ ಅಧ್ಯಯನಗಳಲ್ಲಿ ಆಕ್ಷೇಪಾರ್ಹ ಅಂಶಗಳಿದ್ದರೆ ಅದನ್ನವರು ಬಹಿರಂಗಪಡಿಸಲೂ ಬಿಡುವುದಿಲ್ಲ' ಎಂದಿದ್ದಾರೆ. 

ಚೀನಾ ಸಂಶೋಧನೆ, ಅಮೆರಿಕದ ಹಣ: ಬಯಲಾಯ್ತು ಕೊರೋನಾ ಸೋರಿಕೆ ಸೀಕ್ರೆಟ್!

ಚೀನಾದ ವುಹಾನ್‌ನಿಂದ ವ್ಯಾಪಿಸಿದ ಕೊರೋನಾ ಹೇಗೆ ಹುಟ್ಟಿಕೊಂಡಿತು ಎಂಬುವುದು ನಿಖರವಾಗಿ ತಿಳಿದು ಬಂದಿಲ್ಲ. ಕೆಲ ವರದಿಗಳಲ್ಲಿ ಇದು ವುಹಾನ್ ಮಾರ್ಕೆಟ್‌ನಿಂದ ಹಬ್ಬಿದ್ದು ಎಂದಿದ್ದರೆ, ಇನ್ನು ಕೆಲವು ವರದಿಗಳಲ್ಲಿ ಇದು ವುಹಾನ್‌ನಲ್ಲಿರುವ ಲ್ಯಾಬ್‌ನಿಂದ ಸೋರಿಕೆಯಾಗಿದ್ದು ಎನ್ನುತ್ತಾರೆ. ಅಲ್ಲದೇ ಈ ಮಾರಕ ವೈರಸ್‌ಗೆ ಚೀನಾದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಆಧರೆ ಸರ್ಕಾರ ಇದನ್ನು ಮುಚ್ಚಿಟ್ಟಿದ್ದು, ಸರಿಯಾದ ಅಂಕಿ ಅಂಶಗಳನ್ನು ನೀಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಅಲ್ಲದೇ ಕೊರೋನಾ ಸಂಬಂಧ ಕೆಲ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ ಅನೇಕ ಮಂದಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆಂಬುವುದೂ ಸತ್ಯ.