ಸಿರಿಯಾದಲ್ಲಿ 14 ವರ್ಷಗಳಿಂದ ನಡೆಯುತ್ತಿದ್ದ ಅಂತರ್ಯುದ್ಧದ ಬಳಿಕ ಅಧ್ಯಕ್ಷ ಬಷರ್ ಆಲ್ ಆಸಾದ್ ರಷ್ಯಾಕ್ಕೆ ಪರಾರಿಯಾಗಿದ್ದಾರೆ. ಅಲ್‌ಖೈದಾ ಬೆಂಬಲಿತ ಉಗ್ರ ಸಂಘಟನೆ ಡಮಾಸ್ಕಸ್‌ನ್ನು ವಶಪಡಿಸಿಕೊಂಡಿದ್ದು, ಅಧಿಕಾರ ಹಸ್ತಾಂತರದ ಪ್ರಕ್ರಿಯೆ ಆರಂಭವಾಗಿದೆ.

ಡಮಾಸ್ಕಸ್: ಮಧ್ಯಪ್ರಾಚ್ಯ ಇಸ್ಲಾಮಿಕ್ ದೇಶ ಸಿರಿಯಾದಲ್ಲಿ 14 ವರ್ಷಗಳಿಂದ ನಡೆಯುತ್ತಿದ್ದ ಹಾಗೂ 5 ಲಕ್ಷ ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಅಂತರ್ಯುದ್ಧ ತಾರ್ಕಿಕ ಅಂತ್ಯದ ಘಟ್ಟಕ್ಕೆ ತಲುಪಿದ್ದು, ದೇಶದ ಅಧ್ಯಕ್ಷರಾಗಿದ್ದ ಸರ್ವಾಧಿಕಾರಿ ಬಷರ್‌ ಆಲ್ ಆಸಾದ್ ದೇಶ ಬಿಟ್ಟು ಭಾನುವಾರ ನಸುಕಿನಲ್ಲಿ ರಷ್ಯಾಕ್ಕೆ ಪರಾರಿಯಾಗಿದ್ದಾರೆ. ಈ ಮೂಲಕ ಅಸಾದ್ ಅವರ 24 ವರ್ಷದ ಆಳ್ವಿಕೆ ಹಾಗೂ ಅವರ ಕುಟುಂಬದ 30 ವರ್ಷದ ಆಳ್ವಿಕೆ ಅಂತ್ಯಗೊಂಡಿದೆ. ಅಲ್‌ಖೈದಾ ಬೆಂಬಲಿತ ಹಯಾತ್ ಶಹೀರ್ ಆಲ್-ಶಾಮ್ (ಎಚ್‌ ಟಿಎಸ್) ಎಂಬ ಉಗ್ರ ಸಂಘಟನೆಯ ನಾಯಕ ಅಬು ಮೊಹಮ್ಮದ್ 2011 0 ಧಿಕಾರದ ವಿರುದ್ಧದ ವಂಗೆಯ ನೇತೃತ್ವ ವಹಿಸಿದ್ದ, ಈ ದಂಗೆ ಸುಮಾರು ಒಂದೂವರೆ ದಶಕಗಳ ಬಳಿಕ ಫಲ ನೀಡಿದ್ದು, ರಾಜಧಾನಿ ಡಮಾಸ್ಕಸ್ ಬಂಡುಕೋರರ ವತಕ್ಕೆ ಬಂದಿದೆ. ಅಧ್ಯಕ್ಷೀಯ ಅರಮನೆಯನ್ನೂ ಬಂಡುಕೋರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ದೇಶದ ಹಾಲಿ ಪ್ರಧಾನಿ ಮೊಹಮ್ಮದ್ ಆಲ್-ಜಲಾಲಿ ಅವರನ್ನು ಸದ್ಯದ ಮಟ್ಟಿಗೆ ಅಧಿಕಾರ ಹಸ್ತಾಂತರ ಪೂರ್ಣಗೊಳ್ಳುವ ಪ್ರಕ್ರಿಯೆವರೆಗೆ ಮುಂದುವರಿಯಲು ಉಗ್ರ ನಾಯಕ ಗೋಲಾನಿ ಸೂಚಿಸಿದ್ದಾನೆ ಹಾಗೂ ಅಧಿಕಾರ ಹಸ್ತಾಂತರಕ್ಕೆ ಪ್ರಾಧಿಕಾರ ರಚಿಸಲು ತಾಕಿಟು ಮಾಡಿದ್ದಾನೆ. ಇದರ ಬೆನ್ನಲ್ಲೇ ಮಾತ ನಾಡಿರುವ ಗೋಲಾನಿ, 'ಬಂಡುಕೋರರಿಗೆ ನಾನು ಅಧಿಕಾರ ಹಸ್ತಾಂತರಿಸಲು ಸಿದ್ಧ' ಎಂದಿದ್ದು, ಮುಂದೆ ಚುನಾವಣೆ ನಡೆಯಲಿ ಎಂಬ ಮನವಿಯನ್ನೂ ಮಾಡಿದ್ದಾರೆ. 

ರಾಜಧಾನಿ ಉಗ್ರರ ತೆಕ್ಕೆಗೆ: 2011ರಿಂದ ಅಸಾದ್ ಸರ್ವಾಧಿಕಾರದ ವಿರುದ್ಧ ದಂಗೆ ಆರಂಭವಾಗಿತ್ತು. ಆಲ್ ಖೈದಾ ಬೆಂಬಲಿತ ಟಿಎಸ್) ಬಂಡುಕೋರರು ಇದರ ನೇತೃತ್ವವಹಿ ಸಿದ್ದರು. 2018ರವರೆಗೆ ಜೋರಾಗಿ ನಡೆದಿದ್ದ ದಂಗೆಯನ್ನು ಆ ಬಳಿಕ ಇರಾನ್, ಹಿಜ್ಜುಲ್ಲಾ ಉಗ್ರರು ಹಾಗೂ ರಷ್ಯಾ ಬೆಂಬಲದೊಂದಿಗೆ ಅಸಾದ್ ಯಶಸ್ವಿಯಾಗಿ ಹತ್ತಿಕ್ಕಿದ್ದರು. ಆದರೆ ಇತ್ತೀಚೆಗೆ ಎಚ್‌ಟಿಎಸ್ ಉಗ್ರರ ಮೇಲೆ ಅಸಾದ್ ಸ್ನೇಹಿ ದೇಶ ರಷ್ಯಾ ವಾಯು ದಾಳಿ ಆರಂಭಿಸಿತ್ತು. ಇದರಿಂದ ವ್ಯಗ್ರರಾದ ಮತ್ತೆ ದಂಗೆ ಆರಂಭಿಸಿ ಶನಿವಾರದವರೆಗೆ 4 ಪ್ರಮುಖ ನಗರಗಳನ್ನು ವಶಕ್ಕೆ ತೆಗೆದುಕೊಂಡಿ ದ್ದರು. ಕೊನೆಗೆ ಶನಿವಾರ ತಡರಾತ್ರಿ ಅಥವಾ ಭಾನುವಾರನಸುಕಿನಲ್ಲಿ ರಾಜಧಾನಿಡಮಾಸ್ಕಸ್ ಅನ್ನೂ ತನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. 

ಉಗ್ರರ ಆರ್ಭಟಕ್ಕೆ ಬೆಚ್ಚಿ ಸೇನೆಯು ಶಸ್ತ್ರಾಸ್ತ್ರ ಬಿಟ್ಟು ಪರಾರಿ ಆಗಿದೆ. ಹಿಬ್ಬುಲ್ಲಾ ಸಂಘಟನೆ ಕೂಡ ಸೇನೆಗೆ ತಣ್ಣಗಾಗುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಆಸಾದ್ ದೇಶ ಬಿಟ್ಟು ರಷ್ಯಾಕ್ಕೆ ವಿಮಾನವೊಂದನ್ನು ಹತ್ತಿ ಶನಿವಾರ ತಡರಾತ್ರಿ ಪರಾರಿಯಾಗಿದ್ದಾರೆ. 

ಆಗಿದ್ದೇನು?
1. 2011ರಲ್ಲಿ ಅರಬ್‌ ದೇಶಗಳಲ್ಲಿ ಸರ್ವಾಧಿಕಾರಿಗಳ ವಿರುದ್ಧ ‘ಅರಬ್‌ ದಂಗೆ’ ಆರಂಭವಾಯಿತು. ಈಜಿಪ್ಟ್‌, ಟ್ಯುನಿಷಿಯಾ, ಲಿಬಿಯಾ ಸರ್ವಾಧಿಕಾರಿಗಳು ಪತನರಾದರು

2. ಆ ದಂಗೆ ಸಿರಿಯಾಕ್ಕೂ ಪ್ರವೇಶಿಸಿತ್ತು. ಬಷರ್‌ ಅಲ್‌ ಅಸಾದ್‌ಗೆ ಆರಂಭದಲ್ಲಿ ನಡುಕ ಹುಟ್ಟಿತ್ತು. ಆದರೆ ರಷ್ಯಾ ಹಾಗೂ ಇರಾನ್‌ ನೆರವಿನೊಂದಿಗೆ ದಂಗೆಕೋರರನ್ನು ಬಷರ್‌ ಮಟ್ಟ ಹಾಕಿದ್ದರು

3. ಸಿರಿಯಾ ದಂಗೆಯ ನೇತೃತ್ವ ಹೊತ್ತಿದ್ದು ಅಲ್‌ಖೈದಾ ಬೆಂಬಲಿತ ಹಯಾತ್‌ ತಹ್ರೀರ್‌ ಅಲ್‌- ಶಾಮ್‌ (ಎಚ್‌ಟಿಎಸ್‌) ಬಂಡುಕೋರರು. 2018ರ ಬಳಿಕ ಎಚ್‌ಟಿಎಸ್‌ ಹೋರಾಟ ಕೊಂಚ ಬಲ ಕಳೆದುಕೊಂಡಿತ್ತು

4. ಮತ್ತೆ ಉಗ್ರ ಬೆಂಬಲಿತ ಸಂಘಟನೆಯ ಹೋರಾಟ ತೀವ್ರಗೊಂಡಾಗ ಸಿರಿಯಾದ ಮಿತ್ರ ದೇಶ ರಷ್ಯಾ ವೈಮಾನಿಕ ದಾಳಿ ನಡೆಸಿ ದಂಗೆಕೋರರನ್ನು ಮಟ್ಟ ಹಾಕಲು ಯತ್ನಿಸಿತ್ತು

5. ಇದರಿಂದ ವ್ಯಗ್ರರಾದ ಉಗ್ರರು ಒಂದು ವಾರದಿಂದ ಹೋರಾಟ ತೀವ್ರಗೊಳಿಸಿ, 4 ಪ್ರಮುಖ ನಗರಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಭಾನುವಾರ ನಸುಕಿನಲ್ಲಿ ರಾಜಧಾನಿ ಡಮಾಸ್ಕಸ್‌ ಅನ್ನೇ ವಶಕ್ಕೆ ಪಡೆದರು

6. ಉಗ್ರರ ಆರ್ಭಟಕ್ಕೆ ಬೆಚ್ಚಿದ ಸೇನೆಯು ಶಸ್ತ್ರಾಸ್ತ್ರ ಬಿಟ್ಟು ಪರಾರಿ. ಅಧ್ಯಕ್ಷ ಅಸಾದ್ ಪರಾರಿ. ಎಲ್ಲಿಗೆ ಹೋದರು ಎಂದು ಗೊತ್ತಾಗಿಲ್ಲ.

ಅಧ್ಯಕ್ಷರ ಅರಮನೆಗೆನುಗ್ಗಿ ಲೋಟ ಕೂಡ ಬಿಡದೆ ಹೊತ್ತೊಯ್ದರು!

ಡಮಾಸ್ಕಸ್‌: ಸಿರಿಯಾ ಅಧ್ಯಕ್ಷ ಬಷರ್‌ ಅಲ್‌ ಅಸಾದ್‌, ದಂಗೆಗೆ ಬೆಚ್ಚಿ ದೇಶ ಬಿಟ್ಟು ಓಡಿ ಹೋದ ಕಾರಣ ಅವರ ಅರಮನೆಗೆ ನುಗ್ಗಿದ ಜನರು, ಅವರ ಮನೆಯಲ್ಲಿನ ಸಿಕ್ಕ ಸಿಕ್ಕ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ತಟ್ಟೆ, ಲೋಟ, ಪ್ಲೇಟ್‌ಗಳು, ಹೂಜಿಗಳನ್ನೂ ಹೊತ್ತೊಯ್ದಿದ್ದಾರೆ. ಐಷಾರಾಮಿ ಕೋಣೆಗಳಿಗೆ ನುಗ್ಗಿ ಕುರ್ಚಿ, ಹಾಸಿಗೆಯ ಮೇಲೆ ಕುಳಿತು, ಮಲಗಿ ಸಂಭ್ರಮಿಸಿದ್ದಾರೆ. ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ದಂಗೆಯಾದಾಗಲೂ ಇದೇ ರೀತಿಯ ಚಿತ್ರಣ ಕಂಡುಬಂದಿತ್ತು.

ಲಕ್ಷ ಲಕ್ಷ ಜನರನ್ನು ಕೊಲ್ಲಿಸಿದ್ದ ಕ್ರೂರ ಸರ್ವಾಧಿಕಾರಿ
ಪರಾರಿಯಾಗಿರುವ ಬಷರ್ ಅಲ್‌ ಅಸಾದ್‌ 2000ನೇ ಇಸ್ವಿಯಲ್ಲಿ ಸಿರಿಯಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಂದಿನಿಂದ 24 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. 2000ನೇ ಇಸ್ವಿಗೆ ಮುನ್ನ ಸಿರಿಯಾ ದೇಶ ಬಷರ್‌ ತಂದೆ ಹಫೀಜ್‌ ಅಲ್‌ ಅಸಾದ್‌ ಅವರ ನಿಯಂತ್ರಣದಲ್ಲಿ 30 ವರ್ಷ ಇತ್ತು. ತಂದೆ ಮಗ ಒಟ್ಟಾರೆ 50 ವರ್ಷ ಆಳ್ವಿಕೆ ನಡೆಸಿದ್ದಾರೆ. ತಮ್ಮ ಸರ್ಕಾರದ ವಿರುದ್ಧ ದಂಗೆ ಆರಂಭವಾದ ಬಳಿಕ 5 ಲಕ್ಷ ಜನರನ್ನು ಕೊಲ್ಲಿಸಿದ್ದಾರೆ ಎಂಬ ಆರೋಪ ಬಷರ್‌ ಮೇಲಿದೆ.

ಪರಾರಿ ವೇಳೆ ಅಸಾದ್‌ ಪ್ಲೇನ್‌ ಪತನ ವದಂತಿ
ಡಮಾಸ್ಕಸ್ : ಸಿರಿಯಾ ಬಂಡುಕೋರರ ದಾಳಿಗೆ ಬೆಚ್ಚಿ ದೇಶ ಬಿಟ್ಟು ಓಡಿ ಹೋಗಿರುವ ಪದಚ್ಯುತ ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ಎಲ್ಲಿದ್ದಾರೆ ಎಂಬ ನಿಖರ ಮಾಹಿತಿ ಯಾರಿಗೂ ಲಭ್ಯವಿಲ್ಲ. ಕೆಲವರು ಯುಎಇಗೆ ತೆರಳಿದ್ದಾರೆ ಎಂದಿದ್ದಾರೆ. ಆದರೆ, ಕೆಲವು ಸೋಷಿಯಲ್‌ ಮೀಡಿಯಾ ಬಳಕೆದಾರರು ಅಸಾದ್‌ ವಿಮಾನವನ್ನು ಹೊಡೆದುರುಳಿಸಲಾಗಿದೆ ಅಥವಾ ಪತನಗೊಂಡಿರಬಹುದು ಎಂದು ಶಂಕಿಸಿದ್ದಾರೆ. ಆದರೆ ಅಸಾದ್‌ ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ.

ಇತ್ತೀಚಿನ ವರ್ಷಗಳಲ್ಲಿ ದಂಗೆಗೆ ಬಲಿ ಆದವರು

1. ಶೇಖ್‌ ಹಸೀನಾ, ಬಾಂಗ್ಲಾದೇಶ

2. ಗೋಟಬಯ ರಾಜಪಕ್ಸ, ಶ್ರೀಲಂಕಾ

3. ಸದ್ದಾಂ ಹುಸೇನ್‌, ಇರಾಕ್‌

4. ಮುಅಮ್ಮರ್‌ ಗಡಾಫಿ, ಲಿಬಿಯಾ

ರಾಸಾಯನಿಕ ಅಸ್ತ್ರ ಉಗ್ರರ ಪಾಲು ಭೀತಿ

ಡಮಾಸ್ಕಸ್‌: ಸಿರಿಯಾವನ್ನು ಉಗ್ರ ಸಂಘಟನೆಯು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆಯೇ, ಪದಚ್ಯುತ ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ಸರ್ಕಾರ ಸಿದ್ಧಪಡಿಸಿ ಇಟ್ಟುಕೊಂಡಿದ್ದ ರಾಸಾಯನಿಕ ಅಸ್ತ್ರಗಳು ಉಗ್ರರ ಪಾಲಾಗುವ ಆತಂಕವನ್ನು ಅಮೆರಿಕ ಹಾಗೂ ಕೆಲವು ಪಾಶ್ಚಾತ್ಯ ದೇಶಗಳು ವ್ಯಕ್ತಪಡಿಸಿವೆ.

ಸಿರಿಯಾದಲ್ಲಿ ಐಸಿಸ್ ಚಟುವಟಿಕೆ ಆತಂಕ
ವಾಷಿಂಗ್ಟನ್‌: ಸಿರಿಯಾದಲ್ಲಿನ ಅಸ್ಥಿರತೆಯನ್ನು ದುರ್ಬಳಕೆ ಮಾಡಿಕೊಂಡು ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆ ಮತ್ತೆ ತನ್ನ ಚಟುವಟಿಕೆ ಆರಂಭಿಸಬಹುದು ಎಂದು ಅಮೆರಿಕ ಅತಂಕ ವ್ಯಕ್ತಪಡಿಸಿದೆ.

ಅರಬ್‌ ದಂಗೆಗೆ ಅಧಿಕಾರ ಕಳೆದುಕೊಂಡವರು
ಅರಬ್‌ ದಂಗೆಗೆ ಸಿರಿಯಾ ಸರ್ವಾಧಿಕಾರಿ ಬಷರ್‌ ಅಧಿಕಾರ ಕಳೆದುಕೊಂಡ ರೀತಿಯೇ ಈ ಹಿಂದೆಯೂ ಹಲವು ಅರಬ್‌ ದೇಶಗಳ ಮುಖ್ಯಸ್ಥರು ಚುಕ್ಕಾಣಿ ಕಳೆದುಕೊಂಡಿದ್ದಾರೆ. ಟುನಿಷಿಯಾದಲ್ಲಿ ಬೆನ್‌ ಅಲಿ (2011) , ಲಿಬಿಯಾದಲ್ಲಿ ಗಡಾಫಿ (2011), ಈಜಿಪ್ಟ್‌ನಲ್ಲಿ ಹೋಸ್ನಿ ಮುಬಾರಕ್‌ (2011) ಮತ್ತು ಮೊಹಮ್ಮದ್‌ ಮೋರ್ಸಿ (2013) ಮತ್ತು ಯೆಮೆನ್‌ನಲ್ಲಿ ಅಲಿ ಅಬ್ದುಲ್ಲಾ ಸಲೆಹ್‌ (2012) ಅಧಿಕಾರ ಕಳೆದುಕೊಂಡರು.