ಸತ್ತವಳು ಎದ್ದು ಬಂದಳು; ಎಂಥ ವಿಸ್ಮಯ ಈ ನರಜನ್ಮ!
* ಸತ್ತು ಹೋದ 45 ನಿಮಿದ ಬಳಿಕ ಜೀವಂತವಾದ ಮಹಿಳೆ
* ಅತ್ತ ಮಗಳಿಗೆ ಹೆರಿಗೆ ನೋವು, ಇತ್ತ ತಾಯಿಗೆ ಹೃದಯಾಘಾತ
* ಪವಾಡ ಕಂಡು ವೈದ್ಯರಿಗೇ ಅಚ್ಚರಿ
ಮೇರಿಲ್ಯಾಂಡ್(ಸೆ.20) ಯಾರು ಸಾವನ್ನಪ್ಪುತ್ತಾರೋ ಅವರು ಮತ್ತೆಂದೂ ಮರಳುವುದಿಲ್ಲ ಎಂಬುವುದನ್ನು ನಾವು ಬಾಲ್ಯದಂದಲೇ ಕೇಳಿ ಬಂದಿದ್ದೇವೆ. ಇದು ನಿಜ ಕೂಡಾ. ಆದರೀಗ ಅಚ್ಚರಿಯ ಘಟನೆಯೊಂದು ವರದಿಯಾಗಿದ್ದು, ಇದು ನಿಜವೆಂದು ಯಾರಿಗೂ ನಂಬಲಾಗುತ್ತಿಲ್ಲ. ಆದರೆ ನಂಬಲೇಬೇಕಾಗಿದೆ. ಹೌದು ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಲ್ಲೊಬ್ಬ ಮಹಿಳೆ ಸಾವನ್ನಪ್ಪಿದ್ದು, ಆಕೆ ಮೃತಪಟ್ಟಿರುವುದಾಗಿ ಖುದ್ದು ವೈದ್ಯರೇ ಪರಿಶೀಲಿಸಿ ಘೋಷಿಸಿದ್ದರು. ಆದರೆ ಇದಾದ ಬರೋಬ್ಬರಿ 45 ನಿಮಿಷಗಳ ಬಳಿಕ ಆ ಮಹಿಳೆ ಎದ್ದು ಕುಳಿತ್ತಿದ್ದಾಳೆ.
ದ ಸನ್ ಮಾಡಿದ ವರದಿಯನ್ವಯ ಅಮೆರಿಕದ ಕ್ಯಾಥಿ ಎನ್ನುವವರಿಗೆ ಹೊಸ ಜೀವನ ಸಿಕ್ಕಿದೆ. ಆಕೆ ಅಮೆರಿಕದ ಪೂರ್ವ ಕರಾವಳಿಯ ಮೇರಿಲ್ಯಾಂಡ್ ನಿವಾಸಿ. ವಾಸ್ತವವಾಗಿ ಕ್ಯಾಥಿಯ ಮಗಳು ಗರ್ಭಿಣಿಯಾಗಿದ್ದು, ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇನ್ನು ಕ್ಯಾಥಿ ಗಾಲ್ಫ್ ಕೋರ್ಸ್‌ನಲ್ಲಿದ್ದಾಗ ಈ ಮಾಹಿತಿ ಬಂದಿದೆ. ಕೂಡಲೇ ಆಕೆ ಅಲ್ಲಿಂದ ಆಸ್ಪತ್ರೆಗೆ ತೆರಳಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಆಕೆಗೆ ಹೃದಯಾಘಾತ ಕಾಣಿಸಿಕೊಂಡಿದೆ.
ಇಂತಹ ಪರಿಸ್ಥಿತಿಯಲ್ಲಿ, ಕ್ಯಾಥಿಯನ್ನು ತಕ್ಷಣವೇ ಎಮರ್ಜೆನ್ಸಿ ವಾರ್ಡ್‌ಗೆ ಕರೆದೊಯ್ಯಲಾಯಿತು. ವೈದ್ಯರ ಪ್ರಕಾರ, ಕ್ಯಾಥಿಯ ನಾಡಿ ಸಿಕ್ಕಿಲ್ಲ. ಹೀಗಾಗಿ ಬಹಳ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಯಾಥಿಯ ಮೆದುಳಿಗೆ ಸುಮಾರು 45 ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ವೈದ್ಯರು ಕ್ಯಾಥಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ವೈದ್ಯರ ಭಾಷೆಯಲ್ಲಿ ಹೇಳುವುದಾದರೆ ಕ್ಯಾಥಿಯನ್ನು ಕ್ಲಿನಿಕಲಿ ಡೆಡ್ ಎಂದು ಘೋಷಿಸಲಾಗಿದೆ. ಅತ್ತ, ಕ್ಯಾಥಿಯ ಮಗಳಿಗೆ 36 ಗಂಟೆಯ ಹೆರಿಗೆ ನೋವಿನ ಬಳಿಕ ಸಿಸೇರಿಯನ್ ಮೂಲಕ ಹೆರಿಗೆ ನಡೆದಿದೆ. ಈ ಆತಂಕದ ಸನ್ನಿವೇಶದಲ್ಲಿ ಇತ್ತ ಕ್ಯಾಥಿ ಸತ್ತ ಕೇವಲ 45 ನಿಮಿಷಗಳ ಬಳಿಕ ಮತ್ತೆ ಎದ್ದು ಕುಳಿತ್ತಿದ್ದಾರೆ. ಪವಾಡದಂತೆ ನಡೆದ ಈ ಘಟನೆ ಬಗ್ಗೆ ಕೇಳಿದವರೆಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.