ದುಬೈ(ನ.12): 50 ವರ್ಷಗಳ ಕಾಲ ಪ್ರಧಾನಿ ಆಗಿದ್ದ ಬಹ್ರೇನ್‌ ರಾಜಕುಮಾರ ಖಲೀಫಾ ಬಿನ್‌ ಸಲ್ಮಾನ್‌ ಅಲ್‌ ಖಲೀಫಾ (84) ನಿಧನರಾಗಿದ್ದಾರೆ. 1971ರಿಂದ ನಿಧನರಾಗುವವರೆಗೂ ಹುದ್ದೆ ಅಲಂಕರಿಸಿದ್ದ ಅವರು ಅತ್ಯಂತ ಸುದೀರ್ಘ ಅವಧಿಗೆ ಪ್ರಧಾನಿಯಾದ ವಿಶ್ವದ ಮೊದಲಿಗರಾಗಿದ್ದರು.

ಅನಾರೋಗ್ಯ ಹಿನ್ನೆಲೆಯಲ್ಲಿ ಅಮೆರಿಕದ ಮಾಯೋ ಕ್ಲಿನಿಕ್‌ನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಖಲೀಫಾ ನಿಧನವಾಗಿರುವುದನ್ನು ಬಹ್ರೇನ್‌ ರಾಜ ಶೇಖ್‌ ಹಮದ್‌ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಖಲೀಫಾ ಅವರ ಪದಚ್ಯುತಿಗೆ ಆಗ್ರಹಿಸಿ 2011ರಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರು ದಂಗೆ ಎದ್ದಿದ್ದರು. ಅರಬ್‌ ಕ್ರಾಂತಿಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದ ಖಲೀಫಾ ಪ್ರಧಾನಿ ಹುದ್ದೆಯಲ್ಲಿಯೇ ಮುಂದುವರಿದಿದ್ದರು.

1783ರಿಂದಲೂ ಬಹ್ರೇನ್‌ ಆಡಳಿತ ಅಲ್‌ ಖಲೀಫಾ ಕುಟುಂಬದ ಹಿಡಿತದಲ್ಲಿ ಇದ್ದು, ಪ್ರಧಾನಿ ಹುದ್ದೆಯನ್ನು ತನ್ನಲ್ಲೇ ಇಟ್ಟುಕೊಂಡಿದೆ.

1935 ನ.24ರಂದು ಜನಿಸಿದ ಅಲ್‌ ಖಲೀಫಾ ಸಮೃದ್ಧ ಶ್ರೀಮಂತಿಕೆಗೆ ಹೆಸರಾಗಿದ್ದಾರೆ. 1970ರಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ತಮ್ಮ ವಿರುದ್ಧ ಬಂಡಾಯ ಎದ್ದವರ ದಮನ, ಪ್ರಜಾಪ್ರಭುತ್ವ ಹೋರಾಟಗಾರರ ಹತ್ತಿಕ್ಕುವಿಕೆ ಹಾಗೂ ಸುಧಾರಣಾ ವಿರೋಧಿ ನೀತಿಯನ್ನು ಖಲೀಫಾ ಅನುಸರಿಸುತ್ತಾ ಬಂದಿದ್ದರು.