ವಾಷಿಂಗ್ಟನ್‌(ಡಿ.05):  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನಾಸಾ ಗಗನಯಾತ್ರಿ ಕೇಟ್‌ ರುಬಿನ್ಸ್‌ ಮೊದಲ ಬಾರಿಗೆ ಮೂಲಂಗಿಯನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೂಕ್ಷ್ಮ ಗುರುತ್ವ ಸ್ಥಿತಿಯಲ್ಲಿ ಸಸ್ಯವನ್ನು ಬೆಳೆಯಲು ಸಾಧ್ಯವೇ ಎಂಬುದನ್ನು ಅಧ್ಯಯನ ನಡೆಸುವ ನಿಟ್ಟಿನಿಂದ ಈ ಪ್ರಯೋಗವನ್ನು ಕೈಗೊಳ್ಳಲಾಗಿತ್ತು. ನ.30ರಂದು ಮೂಲಂಗಿ ಸಂಪೂರ್ಣ ಬೆಳವಣಿಗೆ ಆಗಿರುವ ಫೋಟೋವನ್ನು ನಾಸಾ ಟ್ವೀಟ್‌ ಮಾಡಿದೆ.

ಮೂಲಂಗಿಯನ್ನು ಬೆಳೆಯಲು ಪ್ರತ್ಯೇಕವಾದ ಚೇಂಬರ್‌ ನಿರ್ಮಿಸಿ ಗಿಡದ ಬೇರಿಗೆ ರಸಗೊಬ್ಬರ, ನೀರು ಆಮ್ಲಜನಕವನ್ನು ಪೂರೈಕೆ ಮಾಡಲಾಗಿತ್ತು. ಸೂರ್ಯನ ಶಾಖದ ಬದಲು ಎಲ್‌ಇಡಿ ಲೈಟ್‌ನ್ನು ಬಳಕೆ ಮಾಡಲಾಗಿತ್ತು. ಬಿತ್ತನೆ ಮಾಡಿದ 27 ದಿನಗಳ ಬಳಿಕ ಮೂಲಂಗಿ ಸಂಪೂರ್ಣವಾಗಿ ವೃದ್ಧಿ ಆಗಿದೆ. ಮೂಲಂಗಿಯನ್ನು ಬೆಳೆದಿದ್ದು ಹೇಗೆ ಎಂಬುದನ್ನು ತೋರಿಸುವ 10 ಸೆಕೆಂಡ್‌ಗಳ ಟೈಮ್‌ ರಾರ‍ಯಪ್‌ ವಿಡಿಯೋವನ್ನು ನಾಸಾ ಬಿಡುಗಡೆ ಮಾಡಿದೆ.

ವಿಶೇಷವೆಂದರೆ ಬಾಹ್ಯಾಕಾಶ ನಿಲ್ದಾಣದಲ್ಲಿ ಬೆಳೆದಿರುವ ಈ ತರಕಾರಿಯನ್ನು ಫಾಯಿಲ್‌ ಪೇಪರ್‌ನಲ್ಲಿ ಸುತ್ತಿಟ್ಟು, ಕೋಲ್ಡ್‌ ಸ್ಟೋರೇಜ್‌ನಲ್ಲಿ ಸಂಗ್ರಹಿಸಿ ಇಟ್ಟರೆ, 2021ರಲ್ಲಿ ಸ್ಪೇಸ್‌ ಎಕ್ಸ್‌ ಅಥವಾ ಇತರ ವಾಣಿಜ್ಯಿಕ ಸರಕು ಸಾಗಣೆ ನೌಕೆಯ ಮೂಲಕ ಭೂಮಿಗೆ ತರಬಹುದಾಗಿದೆ.