ಇಸ್ಲಾಮಾಬಾದ್‌(ಜೂ.11): ಜನಪ್ರತಿನಿಧಿಗಳಿಗಿಂತ ಸೇನಾಡಳಿತವನ್ನೇ ಹೆಚ್ಚು ಕಂಡಿದ್ದ ಪಾಕಿಸ್ತಾನದಲ್ಲಿ, ಮತ್ತೆ ಅಂಥದ್ದೇ ಆಡಳಿತ ಸ್ಥಾಪಿತವಾಗುವ ಲಕ್ಷಣಗಳು ಕಂಡುಬಂದಿವೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಭಾರೀ ಘೋಷಣೆಗಳೊಂದಿಗೆ ಅಧಿಕಾರಕ್ಕೆ ಬಂದಿದ್ದ ಹಾಲಿ ಪ್ರಧಾನಿ ಇಮ್ರಾನ್‌ ಖಾನ್‌ಕ ಜನಪ್ರಿಯತೆ ದಿನೇ ದಿನೇ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ, ಸೇನೆ ಆಡಳಿತವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯತ್ನ ಮಾಡಿದೆ. ಇದಕ್ಕೆ ಪೂರಕವಾಗಿ ಹಲವು ಪ್ರಮುಖ ಹುದ್ದೆಗಳಿಗೆ ಹಾಲಿ ಮತ್ತು ನಿವೃತ್ತ ಸೇನಾಧಿಕಾರಿಗಳನ್ನು ನಿಯೋಜಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಪಾಕ್‌ನಲ್ಲಿ ಮತ್ತೊಂದು ಬಾಲಾಕೋಟ್‌ ದಾಳಿ ಭೀತಿ!

ವಿಮಾನಯಾನ, ಆರೋಗ್ಯ ಸಚಿವಾಲಯ, ಇಂಧನ ಕ್ಷೇತ್ರ ಸೇರಿದಂತೆ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಹಲವಾರು ಹಾಲಿ ಮತ್ತು ಮಾಜಿ ಮಿಲಿಟರಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಳೆದ 2 ತಿಂಗಳ ಅವಧಿಯಲ್ಲಿ ಈ ನೇಮಕಾತಿಗಳು ನಡೆದಿವೆ. ಅಲ್ಲದೆ ಕೊರೋನಾ ವೈರಸ್‌ ಬಿಕ್ಕಟ್ಟನ್ನು ಎದುರಿಸಲೂ ಸರ್ಕಾರ ಸೇನೆಯ ನೆರವು ಪಡೆದುಕೊಂಡಿದೆ.

ದೇಶದ ಆರ್ಥಿಕ ಹಿಂಜರಿಕೆ, ಹಣದುಬ್ಬರ, ಸ್ವಪಕ್ಷೀಯರ ಭ್ರಷ್ಟಾಚಾರದಿಂದಾಗಿ ಇಮ್ರಾನ್‌ ಖಾನ್‌ ತಮ್ಮ ಪ್ರಭಾವ ಹಾಗೂ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಇತರ ಸಣ್ಣಪುಟ್ಟಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಿರುವ ಕಾರಣ ಇಮ್ರಾನ್‌ ಖಾನ್‌ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಸೇನೆಯ ಬೆಂಬಲವನ್ನು ಪಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಸೇನೆಯ ಕ್ರಮಗಳನ್ನು ಪ್ರಶ್ನಿಸಲಾಗದೇ ಇಮಾನ್‌ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.