* ನ್ಯಾಟೋ ಸೇರ್ಪಡೆಯಾಗುವ ಬಯಕೆ ವ್ಯಕ್ತಪಡಿಸಿರುವ ಫಿನ್ಲೆಂಡ್ ಮತ್ತು ಸ್ವೀಡನ್* ಫಿನ್ಲೆಂಡ್ ಮತ್ತು ಸ್ವೀಡನ್ ವಿರುದ್ಧ ರಷ್ಯಾ ಮತ್ತೆ ಆಕ್ರೋಶ* ನ್ಯಾಟೋ ಸೇನೆ ರಚನೆಯಾದರೆ ರಷ್ಯಾ ಅದರ ವಿರುದ್ಧ ಕ್ರಮ
ಮಾಸ್ಕೋ(ಮೇ.17): ನ್ಯಾಟೋ ಸೇರ್ಪಡೆಯಾಗುವ ಬಯಕೆ ವ್ಯಕ್ತಪಡಿಸಿರುವ ಫಿನ್ಲೆಂಡ್ ಮತ್ತು ಸ್ವೀಡನ್ ವಿರುದ್ಧ ರಷ್ಯಾ ಮತ್ತೆ ಆಕ್ರೋಶ ವ್ಯಕ್ತಪಡಿಸಿದೆ. ಇದು ಮಹಾನ್ ತಪ್ಪು. ಈ ದೇಶಗಳಲ್ಲಿ ನ್ಯಾಟೋ ಸೇನೆ ರಚನೆಯಾದರೆ ರಷ್ಯಾ ಅದರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಷ್ಯಾ ವಿದೇಶಾಂಗ ಖಾತೆ ಉಪ ಸಚಿವ ಸೆರ್ಗೇಯ್ ರಿಬ್ಕೋವ್, ‘ಇಂಥ ಬೆಳವಣಿಗೆಗಳ ಸೇನಾ ಉದ್ವಿಗ್ನತೆ ಹೆಚ್ಚಾಗುತ್ತದೆ. ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬ ಸಾಮಾನ್ಯ ಜ್ಞಾನವನ್ನು ಬಲಿಕೊಟ್ಟು ಕಪೋಲಕಲ್ಪಿತ ಚಿಂತನೆಗಳಿಗೆ ಮಣೆ ಹಾಕಲಾಗಿದೆ. ನಾವು ಇದನ್ನು ಸಹಿಸಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿ ಅವರು ಇರಬಾರದು ಎಂದು ಹೇಳಿದ್ದಾರೆ. ಇದೇ ವೇಳೆ ಫಿನ್ಲೆಂಡ್, ಸ್ವೀಡನ್ ನ್ಯಾಟೋ ಸೇರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈ ದೇಶಗಳಲ್ಲಿ ಸೇನಾ ವಿಸ್ತರಣೆಯಾದರೆ ನಾವು ಸುಮ್ಮನಿರಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದಿಂದ ಭಯಗೊಂಡಿರುವ ಫಿನೆÜ್ಲಂಡ್ ಮತ್ತು ಸ್ವೀಡನ್ ದೇಶಗಳು ನ್ಯಾಟೋ ಸೇರ್ಪಡೆಯಾಗುವ ಬಯಕೆ ವ್ಯಕ್ತಪಡಿಸುವ ಮೂಲಕ ದಶಕಗಳ ಕಾಲದ ಮಿಲಿಟರಿ ಅಲಿಪ್ತ ನೀತಿಯನ್ನು ತೊಡೆದುಹಾಕಲು ನಿರ್ಧರಿಸಿವೆ. ಫಿನ್ಲೆಂಡ್ ರಷ್ಯಾದೊಂದಿಗೆ 1,300 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ.
ರಷ್ಯಾ ವಿರೋಧ ಹೊರತೂ ನ್ಯಾಟೋ ಸೇರ್ಪಡೆಗೆ ಫಿನ್ಲೆಂಡ್ ಸರ್ಕಾರ ನಿರ್ಧಾರ
ರಷ್ಯಾದ ತೀವ್ರ ವಿರೋಧದ ನಡುವೆಯೂ ರಷ್ಯಾದ ನೆರೆಯ ರಾಷ್ಟ್ರವಾದ ಫಿನ್ಲೆಂಡ್ ಸರ್ಕಾರ ಭಾನುವಾರ ನ್ಯಾಟೋ ಒಕ್ಕೂಟ ಸೇರ್ಪೆಡೆಯಾಗುವುದಾಗಿ ಘೋಷಿಸಿದೆ. ರಾಜಧಾನಿ ಹೆಲ್ಸಿನ್ಕಿಯ ಅಧ್ಯಕ್ಷೀಯ ಅರಮನೆಯಲ್ಲಿ ಅಧ್ಯಕ್ಷ ಸೌಲಿ ನಿನಿಸ್ಟೋ ಹಾಗೂ ಪ್ರಧಾನಿ ಸನ್ನಾ ಮರಿನ್ ನ್ಯಾಟೋ ಸದಸ್ಯತ್ವ ಪಡೆಯಲು ಬ್ರುಸೆಲ್ಸ್‌ನಲ್ಲಿರುವ ನ್ಯಾಟೋ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಲಾಗುವುದು ಎಂದು ಘೋಷಿಸಿದ್ದಾರೆ.
ರಷ್ಯಾದ ಆಕ್ರಮಣ ಭೀತಿಯೆದುರಿಸುತ್ತಿರುವ ಫಿನ್ಲೆಂಡ್, ಸ್ವೀಡನ್ ಮೊದಲಾದ ದೇಶಗಳು ನ್ಯಾಟೋ ಸದಸ್ಯತ್ವ ಪಡೆಯಲು ಮುಂದಾದ ಹಿನ್ನೆಲೆಯಲ್ಲಿ ಹಿರಿಯ ನ್ಯಾಟೋ ಅಧಿಕಾರಿಗಳು ಭಾನುವಾರ ಬರ್ಲಿನ್‌ನಲ್ಲಿ ಸಭೆ ನಡೆಸಿದ್ದಾರೆ.
ಪುಟಿನ್ ಪದಚ್ಯುತಿಗೆ ರಷ್ಯಾದಲ್ಲಿ ರಹಸ್ಯ ಸಂಚು
ರಷ್ಯಾದ ಆಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಪದಚ್ಯುತಿಗೆ ರಷ್ಯಾದಲ್ಲಿ ರಹಸ್ಯ ಸಂಚನ್ನು ರೂಪಿಸಲಾಗುತ್ತಿದೆ ಎಂದು ಉಕ್ರೇನಿನ ಸೇನಾ ಜನರಲ್ ಹೇಳಿದ್ದಾರೆ.
ಉಕ್ರೇನಿನ ಜ. ಕೈರಿಲೊ ಬುದಾನೊವ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ರಷ್ಯಾ ಹಾಗೂ ಉಕ್ರೇನ್ ಯುದ್ಧ ವರ್ಷಾಂತ್ಯದ ಒಳಗಾಗಿ ಸಮಾಪ್ತಿಯಾಗುತ್ತದೆ. ಉಕ್ರೇನ್ ವಿರುದ್ಧ ರಷ್ಯಾ ಸೋತಲ್ಲಿ ಪುಟಿನ್ ಅವರನ್ನು ಅಧ್ಯಕ್ಷರ ಸ್ಥಾನದಿಂದ ತೆಗೆದುಹಾಕುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪುಟಿನ್ ಅವರ ಪದಚ್ಯುತಿಗಾಗಿ ಈಗಾಗಲೇ ರಷ್ಯಾದಲ್ಲಿ ಸಂಚು ನಡೆಯುತ್ತಿದೆ. ಪುಟಿನ್ ಪದಚ್ಯುತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ.
ಈ ನಡುವೆ ಪುಟಿನ್ ಅವರ ಅನಾರೋಗ್ಯದ ಕುರಿತು ಸಾಕಷ್ಟುವರದಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಬುದಾನೊವ್, ‘ಪುಟಿನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಟ್ಟಿದೆ’ ಎಂದಿದ್ದಾರೆ. ಮಾಜಿ ಬ್ರಿಟಿಷ್ ಗೂಡಚಾರನಾದ ಕ್ರಿಸ್ಟೋಫರ್ ಸ್ಟೀಲೆ ಕೂಡಾ ಪುಟಿನ್ ಗುಣಪಡಿಸಲಾಗದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.
